

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ ೫೭ನೇ ಸಿಸಿಎಚ್ ಕೋರ್ಟ್‌ನಲ್ಲಿ ಮಂಗಳವಾರ ನಡೆಯಲಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಎರಡು ದಿನಗಳ ಕಾಲ ಸುದೀರ್ಘವಾದ ವಾದ ಮಂಡಿಸಿದ್ದರು. ಇನ್ನು ಮಂಗಳವಾರ ವಿಚಾರಣೆ ಆರಂಭವಾಗುತ್ತಿದಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ. ದರ್ಶನ್ ಜಾಮೀನು ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ. ಈ ಮಧ್ಯೆ ದರ್ಶನ್ ಅಭಿಮಾನಿಗಳು ಸಿ.ವಿ.ನಾಗೇಶ್ ಅವರ ವಾದವನ್ನು ಮಾಧ್ಯಮಗಳಲ್ಲಿ ನೋಡಿ ದರ್ಶನ್‌ಗೆ ಜಾಮೀನು ಸಿಕ್ಕೆ ಸಿಗುತ್ತದೆ ಎಂಬ ಭರವಸೆಯಲ್ಲಿದ್ದಾರೆ.
ನಾಗೇಶ್ ವಾದದಲ್ಲಿ ಪೊಲೀಸರೇ ಟಾರ್ಗೆಟ್!
ನಾಗೇಶ್ ಅವರು ತಮ್ಮ ವಾದದ ವೇಳೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿರುವ ಅಂಶಗಳಲ್ಲಿ ೨೦ ಅನುಮಾಗಳನ್ನು ವ್ಯಕ್ತಪಡಿಸಿದ್ದಾರೆ. ಆರ್.ಆರ್ ನಗರ ಶೆಡ್‌ನ ಸೆಕ್ಯುರಿಟಿ ರೂಮ್ನ ಎರಡು ಸಿಸಿ ಕ್ಯಾಮರಾಗಳ ದೃಶ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಪಿಎಸ್‌ಐ ವಿನಯ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆರೋಪಿಗಳು ಡಿವಿಆರ್ ಸಾಕ್ಷ್ಯಾಧಾರ ನಾಶಪಡಿಸಿದ್ದಾರೆಂದು ಆರೋಪಿಸಲಾಗಿದೆ. ಆದರೆ ಜೂ.೯ರಂದೇ ಪಿಎಸ್‌ಐ ವಿನಯ್ ಇದನ್ನು ಆರೋಪಿ ಎ-೧೪ ಆರೋಪಿ ಆದ ಪ್ರದೂಶ್‌ಗೆ ಕಳುಹಿಸಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಆ ವಿಡಿಯೋ ಡಿಲೀಟ್ ಮಾಡಿದ್ದು ಯಾರು? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ ಎಂದು ವಾದ ಮಂಡಿಸಿದ್ದರು.
ಪಿಎಸ್‌ಐ ವಿನಯ್ ಮೊಬೈಲ್ನ ಏಕೆ ಸೀಜ್ ಮಾಡಿಲ್ಲ? ಅವರ ಮೊಬೈಲ್ನಿಂದ ವಿಡಿಯೋನ ಏಕೆ ರಿಟ್ರೀವ್ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ. ರಕ್ತದ ಕಲೆ ಇರುವ ಎರಡು ಮರದ ಕೊಂಬೆ ವಶಕ್ಕೆ ಪಡೆದಿದ್ದಾರೆ. ಎಫ್‌ಎಸ್‌ಎಲ್ ವರದಿಯಲ್ಲಿ ರಕ್ತವೇ ಇಲ್ಲ ಎಂದಿದೆ. ಇಂತಹ ತನಿಖೆ ಆಧಾರದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಸಾಧ್ಯವೇ ಎಂದು ಮಂಡಿಸಿದ ವಾದದಲ್ಲಿ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದರು.ಪೊಲೀಸರ ತನಿಖಾ ವರದಿ ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ಕಥೆಯಂತಿದೆ ಎಂದು ವ್ಯಂಗ್ಯವಾಡಿದ್ದರು.