

ಮೂಲತಃ ಭಕ್ತಿಯು ಒಂದೇ ಆದರೂ ಅದು ವಿವಿಧ ಭಕ್ತರಲ್ಲಿ ವಿವಿಧ ರೀತಿಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಭಾಗವತ ಶಾಸ್ತಗ್ರಂಥವು ಇದನ್ನು ಪ್ರಮುಖವಾಗಿ ಒಂಬತ್ತು ರೀತಿಯಲ್ಲಿ ತಿಳಿಸಿದೆ. ಶ್ರವಣ ಎಂದರೆ ಕೇಳುವುದು. ಭಗವಂತನ ಲೀಲೆ, ಮಹಿಮೆ, ನಾಮಮಹಾತ್ಮೆ, ಅವನ ಅನಂತ ಕಲ್ಯಾಣ ಗುಣಗಳನ್ನು ಸಂತರು, ಕವಿಗಳು ವರ್ಣಿಸಿರುವುದನ್ನು ಶ್ರದ್ಧೆ, ನಿಷ್ಠೆಗಳಿಂದ ಕೇಳುವುದಕ್ಕೆ ಶ್ರವಣ ಭಕ್ತಿ ಎಂದು ಕರೆಯುತ್ತಾರೆ. ಇದನ್ನು ಕೇಳುವಾಗ ಭಕ್ತನು ಹೃದಯದಲ್ಲಿ ಭಕ್ತಿ ತುಂಬಿ ಪುಳಕಿತ ಅನುಭವವನ್ನು ಪಡೆಯುತ್ತಾನೆ. ಅಮೃತಮಯವಾದ ಭಗವಂತನ ದಿವ್ಯಲೀಲೆಗಳನ್ನು ಆಲಿಸುವುದರಿಂದ ಭಕ್ತನ ಮನಸ್ಸಿನಲ್ಲಿ ನಾಮರೂಪಗಳು ಅಚ್ಚಳಿಯದೆ ಉಳಿದು ಸಾಧನೆಗೆ ನೆರವಾಗುತ್ತವೆ. ಇದರಿಂದ ಸಾಧಕನಿಗೆ ಭಗವಂತನು ಬರಿಯ ಮೂರ್ತಿಯಾಗದೆ, ಜ್ವಲಂತ, ಜೀವಂತ ವ್ಯಕ್ತಿಯಾಗುತ್ತಾನೆ. ಇದು ಎಲ್ಲ
ಪುರುಷಾರ್ಥಗಳನ್ನು ಕರುಣಿಸುವಂತಹದು ಹಾಗೂ ಭಗವಂತನ ಕುರಿತು ಸದಾ ಚಿಂತಿಸುವುದರಿಂದ ಪ್ರಾಪಂಚಿಕತೆಯು ಕಡಿಮೆಯಾಗುತ್ತದೆ. ಚಿತ್ತಶುದ್ಧಿ ಉಂಟಾಗಿ ಭಗವತ್ಪಥವನ್ನು ಪಡೆಯಲು ಸುಲಭವಾಗುತ್ತದೆ.
2. ಕೀರ್ತನ ಭಕ್ತಿ: ಕೀರ್ತನೆ ಎಂದರೆ ಭಜಿಸುವುದು, ಹಾಡುವುದು ಎಂದರ್ಥ. ಭಗವಂತನ ನಾಮ- ರೂಪ- ಗುಣ- ಲೀಲೆಗಳನ್ನು ಮನಃಪೂರ್ವಕವಾಗಿ ಹಾಡಿ ನಲಿಯುವುದೇ ಕೀರ್ತನ ಭಕ್ತಿ. ಶರೀರದಲ್ಲಿ ರೋಮಾಂಚನದ ಅನುಭವ; ಅಶ್ರುಧಾರೆ ಹಾಗು ಗದ್ಗದ ಕಂಠದಿಂದ ಭಗವನ್ನಾಮವನ್ನು ಹಾಡುತ್ತಾ ದಿವ್ಯಾನುಭವವನ್ನು ಪಡೆಯುವುದೇ ಕೀರ್ತನ ಭಕ್ತಿಯ ಸ್ವರೂಪ. ಕೃತಯುಗದಲ್ಲಿ ಧ್ಯಾನ-ತಪಸ್ಸು, ತ್ರೇತಾಯುಗದಲ್ಲಿ ಯಜ್ಞ-ಯಾಗಾದಿಗಳು ಹಾಗೂ ದ್ವಾಪರ ಯುಗದಲ್ಲಿ ಅರ್ಚನೆ ಇವುಗಳಿಂದ ಯಾವ ಫಲವನ್ನು ಸಾಧಕರು ಪಡೆಯುತ್ತಿದ್ದರೋ, ಅದೇ ಫಲವನ್ನು ಕಲಿಯುಗದಲ್ಲಿ ಭಗವಂತನ ನಾಮ ಕೀರ್ತನೆಯಿಂದ ಪಡೆಯಬಹುದು ಎಂದು ಶಾಸ್ತಜ್ಞರು ತಿಳಿಸಿದ್ದಾರೆ. ಆದ್ದರಿಂದಲೇ ದಾಸರು ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ... ಎಂದು ಹೇಳಿರುವುದು.
ಭಜನ ಸೇಯರಾದಾ? ರಾಮ | ಅಜರುದ್ರಾದುಲಕು ಸತತಮಾತ್ಮಮಂತ್ರಮೈನ ರಾಮ|| ಬ್ರಹ್ಮರುದ್ರಾದಿಗಳು ಸತತವಾಗಿ ಮಾಡುತ್ತಿರುವ ಜಪವಾದ ರಾಮನಾಮ ಭಜನೆ ಮಾಡಬಾರದೆ? ಎಂದು ತ್ಯಾಗರಾಜರು ಕೇಳುತ್ತಾರೆ. ಭಗವಂತನನ್ನು ನಿರಂತರ ಭಜಿಸುವುದರಿಂದ ಕೃತಾರ್ಥರಾಗು ತ್ತೇವೆ. ಭವ ಬಂಧನದಿಂದ ಮುಕ್ತರಾಗುತ್ತೇವೆ. ಅಮೃತತ್ವವನ್ನು ಪಡೆಯತ್ತೇವೆ.