

Apple | ನಾವೆಲ್ಲರೂ ಪ್ರತಿದಿನ ಅನೇಕ ಆಹಾರಗಳನ್ನು ಸೇವನೆ ಮಾಡುತ್ತೇವೆ. ಹಣ್ಣು, ತರಕಾರಿ, ಸೊಪ್ಪು, ಕಾಳು ಸೇರಿದಂತೆ ಇನ್ನೂ ಹತ್ತು ಹಲವು ಆಹಾರಗಳು ಪ್ರತಿನಿತ್ಯ ನಮ್ಮ ದೇಹ ಸೇರುತ್ತವೆ. ಈ ಆಹಾರಗಳು ಪೌಷ್ಟಿಕವಾಗಿದ್ದರೂ ಸಹ ಅವುಗಳು ಕೆಲವು ನೈಸರ್ಗಿಕ ವಿಷಕಾರಿ ಅಂಶಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸದಿದ್ದರೆ ನಮ್ಮ ದೇಹದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಅಂದಹಾಗೆ ನಾವೆಲ್ಲರೂ ಸೇಬು ಹಣ್ಣನ್ನ ಸೇವಿಸುತ್ತೇವೆ. ಸೇಬಿನ ಜೊತೆ ಅದರ ಚಿಕ್ಕ-ಚಿಕ್ಕ ಬೀಜಗಳನ್ನು ಸೇವಿಸುವುದು ಸಾಮಾನ್ಯ. ಆದರೆ ಸೇಬಿನೊಂದಿಗೆ ಬೀಜವನ್ನು ಸೇವಿಸುವುದರಿಂದ ನಾನಾ ಸಮಸ್ಯೆ ಎದುರಾಗುತ್ತವೆ ಎಂದು ಹೇಳಲಾಗಿದೆ.
ಹಣ್ಣುಗಳ ಬೀಜಗಳಲ್ಲಿ ಪೋಷಕಾಂಶಗಳು ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಕೆಲವು ಹಣ್ಣುಗಳ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹ ಅನಾರೋಗ್ಯಕ್ಕೆ ತುತ್ತಾಗಬಹುದು ಎಂದು ಕೆಲ ವರದಿಗಳು ಹೇಳುತ್ತವೆ. ಯಾಕೆಂದರೆ ಕೆಲವು ಹಣ್ಣಿನ ಬೀಜಗಳು ನಮಗೆ ಉಪಯೋಗಕ್ಕೆ ಬರುವುದಿಲ್ಲ, ಅದರಲ್ಲಿ ಸೇಬು ಹಣ್ಣಿನ ಬೀಜ ಕೂಡ ಒಂದಾಗಿದೆ. ಸೇಬು ಹಣ್ಣಿನ ಬೀಜಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು. ಒಂದು ವೇಳೆ ಹಣ್ಣನ್ನು ತಿನ್ನುವಾಗ ಅದರ ಬೀಜ ನಮ್ಮ ಬಾಯಲ್ಲಿ ಸಿಕ್ಕಾಗ ತಕ್ಷಣವೇ ಅದನ್ನು ಉಗಿಯಬೇಕು. ಒಂದು ಅಥವಾ ಎರಡು ಸೇಬು ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಬದಲಾಗಿ 5 ಗ್ರಾಂಗಿಂತಲೂ ಹೆಚ್ಚು ಸೇಬು ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅನಾರೋಗ್ಯ ಸಮಸ್ಯೆಗಳು ಬರುತ್ತವೆ ಎನ್ನುವುದನ್ನು ಕೆಲವು ವರದಿಗಳು ಹೇಳುತ್ತವೆ.
ಸೇಬು ಬೀಜಗಳು ಅಮಿಗ್ಡಾಲಿನ್ ಅಂಶವನ್ನು ಹೊಂದಿರುತ್ತವೆ, ಇದನ್ನು ಹಲ್ಲಿನಿಂದ ಜಗಿದು ಪುಡಿಮಾಡಿ ಸೇವಿಸಿದಾಗ ಸೈನೈಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಕೆಲ ಬೀಜಗಳನ್ನು ಸಂಪೂರ್ಣವಾಗಿ ನುಂಗುವುದು ಹಾನಿಕಾರಕವಲ್ಲದಿದ್ದರೂ, ಅವುಗಳನ್ನು ಹೆಚ್ಚು ಜಗಿದು ಸೇವಿಸುವುದು ಸೈನೈಡ್ನಂತಹ ವಿಷ ಉತ್ಪತ್ತಿಗೆ ಕಾರಣವಾಗಬಹುದು. ಇದರಿಂದ ತಲೆತಿರುಗುವಿಕೆ, ಗೊಂದಲ ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಲಿವೆ. ಸೇಬುಗಳನ್ನು ತಿನ್ನುವ ಮೊದಲು ಬೀಜಗಳನ್ನು ತೆಗೆದುಹಾಕುವುದು ಹಾಗೂ ಆ ಬೀಜ ತಿನ್ನುವುದನ್ನು ನಿಲ್ಲಿಸುವುದು ಉತ್ತಮ.
ಅಮಿಗ್ಡಾಲಿನ್ ಅಂಶವನ್ನು ತಪ್ಪಿಸಲು, ಸೇಬಿನ ರಸವನ್ನು ಕುಡಿಯುವ ಮೊದಲು ಅವುಗಳ ಬೀಜಗಳನ್ನು ತೆಗೆದುಹಾಕುವುದು ಉತ್ತಮ ಎಂದು ಸಂಶೋಧನೆಯಲ್ಲಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಮತ್ತೊಂದು ವರದಿಯಲ್ಲಿ ಸೇಬಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಅಮಿಗ್ಡಾಲಿನ್ ಇರುವುದರಿಂದ, ಬೀಜಗಳನ್ನು ತೆಗೆದ ನಂತರ ತಿನ್ನುವುದು ಉತ್ತಮ ಎಂದು ಅನೇಕ ವಿಜ್ಞಾನಿಗಳು ಹೇಳಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಸೇಬಿನಿಂದ ಬೀಜಗಳನ್ನು ತೆಗೆದ ನಂತರವೇ ಸೇವಿಸಲು ಕೊಡಬೇಕು ಎನ್ನಲಾಗಿದೆ.
(ಏಜೆನ್ಸೀಸ್)
ಸೇಬು, ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದ್ದು, ಒಂದು ಸೇಬಿನಲ್ಲಿ 8 ರಿಂದ 10 ಬೀಜಗಳಿರುತ್ತವೆ. ಅವುಗಳನ್ನು ಹೊರತೆಗೆದು ತಿನ್ನುವುದರಿಂದ ಆರೋಗ್ಯದ ಮೇಲೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ವರದಿಗಳು ಹೇಳಿವೆ.