ಜೀವನ ಶೈಲಿ ಬದಲಾವಣೆಯಿಂದ ಆರೋಗ್ಯ

ldh sports
ನಂದಿಬಟ್ಟಲು ಗ್ರಾಮದಲ್ಲಿ ಆಯೋಜಿಸಿದ್ದ ಬೀರೂರು ಎ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಉದ್ಘಾಟನೆಯನ್ನು ತಿಗಡ ಮತ್ತು ನಂದಿಬಟ್ಟಲು ಗ್ರಾಪಂ ಅಧ್ಯಕ್ಷರಾದ ಶ್ರೀದೇವಿ, ಅಬೂಬಕರ್ ಕುಟ್ಟಿ, ಶಿಕ್ಷಕರಾದ ಬಸವರಾಜ್ ಮತ್ತಿತರರು ಉದ್ಘಾಟಿಸಿದರು. ರಮೇಶ್ ಗೋವಿಂದೇಗೌಡ, ಶಿವಕುಮಾರ್ ಇತರರಿದ್ದರು.
Published on

ಲಿಂಗದಹಳ್ಳಿ: ಆಟೋಟಗಳಿಂದ ಮನಸ್ಸು ಮತ್ತು ದೇಹ ಸದೃಢವಾಗುತ್ತದೆ. ಹಾಗಾಗಿ ಯಾವುದಾದರೂ ಕ್ರೀಡೆಯಲ್ಲಿ ಭಾಗವಹಿಸಿ ಜೀವನ ಶೈಲಿ ಉತ್ತಮ ಪಡಿಸಿಕೊಂಡರೆ ಅನೇಕ ರೋಗಗಳಿಂದ ಮುಕ್ತರಾಗಬಹುದು ಎಂದು ನಂದಿಬಟ್ಟಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬೂಬಕರ್ ಕುಟ್ಟಿ ಹೇಳಿದರು.

ತರೀಕೆರೆ ತಾಲೂಕಿನ ನಂದಿಬಟ್ಟಲು ಮುರಾರ್ಜಿ ದೇಸಾಯಿ ವಸತಿ ಶಾಲೆ ಆತಿಥ್ಯದಲ್ಲಿ ಗುರುವಾರ ಆಯೋಜಿಸಿದ್ದ ಬೀರೂರು ಎ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಗ್ರಾಮೀಣ ಮಕ್ಕಳು ಪೇಟೆ ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಅವಕಾಶಗಳು ಸಕಾಲದಲ್ಲಿ ದೊರೆಕಿದರೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಪ್ರತಿಭೆ ತೋರುತ್ತಾರೆ. ವಿದ್ಯಾರ್ಥಿಗಳು ಕ್ರೀಡಾ ಭಾವನೆಯಿಂದ ಆಟೋಟಗಳಲ್ಲಿ ಭಾಗವಹಿಸಬೇಕು ಎಂದರು.
ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದ ತಿಗಡ ಗ್ರಾಪಂ ಸದಸ್ಯ ರಮೇಶ್ ಗೋವಿಂದೇಗೌಡ ಮಾತನಾಡಿ, ಕ್ರೀಡಾಪಟುಗಳೆಲ್ಲರೂ ಸಹೋದರರಂತೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತೀರ್ಪುಗಾರರು ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ತಮ್ಮ ವಿದ್ಯಾರ್ಥಿಗಳೆಂದೇ ಭಾವಿಸಿ ನ್ಯಾಯಯುತ ತೀರ್ಪು ನೀಡಬೇಕು ಎಂದು ಸಲಹೆ ನೀಡಿದರು.
ನಂದಿಬಟ್ಟಲು ಮುರಾರ್ಜಿ ದೇಸಾಯಿ ಶಾಲೆ ಮುಖ್ಯ ಶಿಕ್ಷಕ ಬಸವರಾಜ ಮಾತನಾಡಿ, ತಮ್ಮ ವಸತಿ ಶಾಲಾ ಆವರಣದ ಆಟದ ಮೈದಾನ ಕಿರಿದಾಗಿದೆ. ಕ್ರೀಡಾಪಟುಗಳಿಗೆ ತೊಂದರೆ ಆಗಬಾರದೆಂಬ ಕಾರಣದಿಂದ ತಣಿಗೆಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಮತ್ತಿತರರು ಉತ್ತಮ ಕ್ರೀಡಾಂಗಣ ಸಜ್ಜುಗೊಳಿಸಿದ್ದಾರೆ ಎಂದರು.
ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್, ಬೀರೂರು ವಲಯದ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ದೈಹಿಕ ಶಿಕ್ಷಕ ಪರಿವೀಕ್ಷಕ ಜಯದೇವಪ್ಪ, ಸಹ ಶಿಕ್ಷಕರಾದ ಎಸ್.ಎಂ.ನವೀನ್ , ಎ.ಸತೀಶ್, ಮಲ್ಲಿಕಾರ್ಜುನ ಸ್ವಾಮಿ, ಪಿ.ಎನ್.ಪ್ರದೀಪ್, ಎನ್.ಸತೀಶ್, ಜಿ.ಪ್ರವೀಣ್ ನಾಯ್ಕ, ಅವಿನಾಶ್, ಸುನೀತಾ, ಸುಜಾತಾ, ನಮೀಮ್ ಉನ್ನಿಸಾ, ರೋಹಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net