

ಪಿರಿಯಾಪಟ್ಟಣ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಜೆ.ಎಸ್.ನಾಗರಾಜ್ ಎಚ್ಚರಿಸಿದರು.
ಪಟ್ಟಣದ ಕೆ.ಆರ್.ಫಂಕ್ಷನ್ ಹಾಲ್‌ನಲ್ಲಿ ರೋಟರಿ ಐಕಾನ್ಸ್ ಸಂಸ್ಥೆ ಮತ್ತು ಕಂಪಾನಿಯೋ ಸಹಯೋಗದಲ್ಲಿ ಏರ್ಪಡಿಸಿರುವ 15 ದಿನಗಳ ಉಚಿತ ಪೂಟ್ ಪಲ್ಸ್ ಥೆರಪಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ಕಾಳಜಿಯಿಂದ ನಮ್ಮ ದೇಹವನ್ನು ನಾವು ಪ್ರೀತಿಸಬೇಕು. ಮನುಷ್ಯನಿಗೆ ಆರೋಗ್ಯ ಸಮಸ್ಯೆಯಾಗುತ್ತಿದ್ದರೆ ಯಾವುದೇ ಕೆಲಸದ ಮೇಲೂ ಗಮನ ಕೇಂದ್ರೀಕರಿಸಲಾಗುವುದಿಲ್ಲ. ಆದ್ದರಿಂದ ಆರೋಗ್ಯದ ವಿಷಯದಲ್ಲಿ ಎಲ್ಲರೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಆಹಾರ ಪದ್ಧತಿಯು ಸಹ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೆಚ್ಚು ಇಳುವರಿ ಪಡೆಯಲು ಅತ್ಯಧಿಕ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತಿತರ ರೋಗಗಳನ್ನು ಸುಲಭವಾಗಿ ತಂದುಕೊಳ್ಳುತ್ತಿದ್ದೇವೆ ಎಂದು ಎಚ್ಚರಿಸಿದರು.
ನಮ್ಮ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ನಿಯಂತ್ರಣದಿಂದ ದೀರ್ಘಕಾಲದ ವರೆಗೆ ಆರೋಗ್ಯವಂತರಾಗಿ ಬದುಕಬಹುದು ಎಂದು ಅಭಿಪ್ರಾಯಪಟ್ಟರು.
ರೋಟರಿ ಐಕಾನ್ಸ್ ಸಂಸ್ಥೆ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ಹಲವು ಕಾಯಿಲೆಗಳಿಗೆ ಒಂದೇ ಸೂರಿನಡಿ ಉಚಿತ ಚಿಕಿತ್ಸೆ ದೊರೆತರೆ ಆರೋಗ್ಯದ ಸುಧಾರಣೆಯಾಗಲಿದೆ ಎಂಬ ಭರವಸೆಯೊಂದಿಗೆ ಜನರು ಆರೋಗ್ಯ ಶಿಬಿರಗಳಿಗೆ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರ ಭರವಸೆ ಹುಸಿಯಾಗದಂತೆ ಚಿಕಿತ್ಸೆ ಸಿಗುವಂತಾಗಲಿ ಎಂದರು.
ಕಂಪಾನಿಯೋ ಸಂಸ್ಥೆಯ ಶಿವರಾಜ್ ಮಾತನಾಡಿ, ಅವಶ್ಯಕತೆಗಿಂತ ಹೆಚ್ಚಿನ ಔಷಧ ಮತ್ತು ಚಿಕಿತ್ಸೆಯನ್ನು ಇಂಗ್ಲಿಷ್ ಮೆಡಿಸನ್ ಹೆಸರಿನಲ್ಲಿ ನಾವು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಣಗುತ್ತಿದ್ದೇವೆ. ಇದರಿಂದ ದೀರ್ಘಕಾಲಿನ ಅಡ್ಡಪರಿಣಾಮಗಳು ಸಹ ನಮ್ಮ ದೇಹದ ಮೇಲಾಗುತ್ತಿದೆ. ಈ ರೀತಿಯ ಶಿಬಿರಗಳಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ಚಿಕಿತ್ಸೆ ಪಡೆಯಬಹುದು ಎಂದು ಭರವಸೆ ನೀಡಿದರು. ಶಿಬಿರದಲ್ಲಿ ಬುಧವಾರ 50 ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದುಕೊಳ್ಳಲು ನೋಂದಣಿ ಮಾಡಿಸಿಕೊಂಡು ಫೂಟ್ ಪಲ್ಸ್ ಥೆರಪಿ ಚಿಕಿತ್ಸೆ ಪಡೆದುಕೊಂಡರು.
ರೋಟರಿ ಐಕಾನ್ಸ್ ಕ್ಲಬ್‌ನ ಉಪಾಧ್ಯಕ್ಷ ಎಂ.ಬಿ.ಸಂಪತ್, ಖಜಾಂಚಿ ಬಿ.ಆರ್.ಗಣೇಶ್, ಪದಾಧಿಕಾರಿಗಳಾದ ಡಿ.ರಮೇಶ್, ಸಿ.ಎನ್.ವಿಜಯ್, ಸತೀಶ್ ಆರಾಧ್ಯ, ಎಸ್.ಕೆ.ಸುನೀಲ್ ಮತ್ತಿತರರಿದ್ದರು.