

ಶಿವಮೊಗ್ಗ: ಪ್ರತಿನಿತ್ಯ ಯೋಗಭ್ಯಾಸ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ ಎಂಬುದನ್ನು ನಮ್ಮ ಪೂರ್ವಜರು ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಇದರ ಬಗ್ಗೆ ವಿವಿಧ ಆಯಾಮದಲ್ಲಿ ಅಧ್ಯಯನ ನಡೆಸಿದ ಬಳಿಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆರಂಭವಾಗಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಕ್ಷಣ ಸಮಿತಿಯಿಂದ ನಗರದ ಆದಿಚುಂಚನಗಿರಿ ಶಾಲಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗಭ್ಯಾಸ ಕಾರ್ಯಕ್ರದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದ ಅವರು, ವ್ಯಕ್ತಿ ಆರೋಗ್ಯವಾಗಿದ್ದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ ಎಂದರು.
ಇಂದು ಜೀವನ ಮೌಲ್ಯಗಳು ಕುಸಿಯುತ್ತಿವೆ. ಯಾರೂ, ಯಾರನ್ನೂ ತಿದ್ದಲಾರದ ಸ್ಥಿತಿಯಿದೆ. ಹಲವು ವರ್ಷಗಳ ಹಿಂದೆ ಮನೆ, ಶಾಲೆ, ದೇವಸ್ಥಾನಗಳು ವ್ಯಕ್ತಿಯನ್ನು ತಿದ್ದುವ ಸ್ಥಳಗಳಾಗಿದ್ದವು.ಈಗ ಈ ಸ್ಥಳಗಳಲ್ಲಿರುವವರ ಮಾತುಗಳನ್ನೂ ಕೇಳುವುದಿಲ್ಲ ಎಂಬ ಸ್ಥಿತಿಯಿದೆ. ಇದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಯೋಗ ಅತ್ಯುತ್ತಮ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.
ವಾರದಲ್ಲಿ ಒಂದು ದಿನ ಮನೆಯ ಎಲ್ಲ ಸದಸ್ಯರೂ ಒಂದುಗೂಡಿ ಕನಿಷ್ಠ 10 ನಿಮಿಷ ಭಜನೆ ಮಾಡುವುದು, ಸೌಹಾರ್ದಯುತವಾಗಿ ಮಾತನಾಡುವುದು, ಒಟ್ಟಿಗೆ ಊಟ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಮೌಲ್ಯಗಳ ಸುಧಾರಣೆಯಾಗುವ ಅವಕಾಶವಿದೆ ಎಂದರು.
ಯೋಗ ಮಾಡುವುದು ಮಾತ್ರವಲ್ಲದೇ ಯೋಗದ ಆಚೆಗಿನ ಚಿಂತನೆಗಳು ಮನುಷ್ಯನನ್ನು ಬೌದ್ಧಿಕವಾಗಿ ಸದೃಢ ಮಾಡುತ್ತವೆ. ಯೋಗದ ಆಚೆಗಿನ ಧ್ಯಾನ ಮನುಷ್ಯನ ಬೌದ್ಧಿಕ ಶಕ್ತಿಯ ವೃದ್ಧಿಗೆ ಕಾರಣವಾಗಲಿದೆ ಅಷ್ಟಾಂಗ ಯೋಗವು ಯಮ ಮತ್ತು ನಿಯಮಗಳ ಮೇಲೆ ನಿಂತಿದೆ ಎಂದು ತಿಳಿಸಿದರು.
ರಾಮಾಯಣದಲ್ಲಿ ಕೈಕೇಯಿ ಭರತನನ್ನು ಪಟ್ಟಕ್ಕೆ ತರಲು ತಂತ್ರ ಮಾಡಿದರೆ, ಭರತ ಅದನ್ನು ಒಪ್ಪಿಕೊಳ್ಳದೆ ಸಿಂಹಾಸನ ತ್ಯಾಗ ಮಾಡುತ್ತಾನೆ. ಇಂತಹ ಅದ್ಭುತ ಸಾಹಿತ್ಯ ರಾಮಾಯಣದಲ್ಲಿದೆ. ಇದನ್ನು ಮಕ್ಕಳಿಗೆ ತಿಳಿಸುವ ಹೊಣೆಗಾರಿಕೆ ಕೂಡ ನಮ್ಮ ಮೇಲಿದೆ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಕಿರಿಯ ಸ್ವಾಮೀಜಿ ಶ್ರೀ ಸಾಯಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಯೋಗ ಸಾಧಕ ಡಾ.ಭ.ಮ.ಶ್ರೀಕಂಠ, ಜಿಲ್ಲಾ ಸಂಘ ಚಾಲಕ ಬಿ.ವಿ.ರಂಗನಾಥ ಉಪಸ್ಥಿತರಿದ್ದರು. ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಎಚ್.ವೈ.ಸಂಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.