

ಕಾರವಾರ: ಕರೊನಾ ರೋಗಿಗಳ ಮೊಬೈಲ್ ಸಂಖ್ಯೆ ಪಡೆದು ಅವರಿಗೆ ವಿಶ್ವ ಆರೋಗ್ಯ ಸಂಸ್ಥೆ ಹೆಸರಿನಲ್ಲಿ ವಂಚನೆಗೆ ಯತ್ನಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಸೋಂಕಿತರ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮುಂತಾದ ವಿವರಗಳಿರುವ ಅಪ್ಪಟ ಸರ್ಕಾರಿ ದಾಖಲೆ ಜಿಲ್ಲಾಡಳಿತಕ್ಕೆ ಸಿಗುವುದಕ್ಕೂ ಮೊದಲೇ ನೆಟ್ಟಿಗರಿಗೆ ಲಭ್ಯವಾಗುತ್ತಿದೆ. ಹಲವರು ಇದನ್ನು ವಾಟ್ಸ್ಆಪ್, ಫೇಸ್ಬುಕ್ ಸ್ಟೇಟಸ್ ಇಟ್ಟುಕೊಳ್ಳುವುದು ಹಾಗೂ ಗ್ರ್ರೂಪ್ಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಸೋಂಕಿತರಿಗೆ ಸಾಮಾಜಿಕವಾಗಿ ತೊಂದರೆ ಉಂಟಾಗುವ ಜತೆಗೆ, ವಂಚಕರಿಗೂ ಅನುಕೂಲ ಮಾಡಿಕೊಡಲಾಗುತ್ತಿದೆ.
‘ಕೋವಿಡ್-19 ಪರಿಹಾರ ನಿಧಿಗೆ ನೀವು ಆಯ್ಕೆಯಾಗಿದ್ದೀರಿ. ನಿಮ್ಮ ಖಾತೆಗೆ 1,80,000 ಪೌಂಡ್ ಪರಿಹಾರ ನೀಡಲಿದ್ದೇವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಸರಿನಲ್ಲಿ ಇ-ಮೇಲ್ ಕಳಿಸಲಾಗುತ್ತಿದೆ. ಐವಿಆರ್ ಸಂಖ್ಯೆಯಿಂದ ಎಸ್ಎಂಎಸ್ ಮಾಡಲಾಗುತ್ತಿದೆ. ಪೊಲೀಸ್ ಇಂಟಲಿಜೆನ್ಸಿ ಹೆಸರಿನಲ್ಲೂ ಕರೆ ಬರುತ್ತದೆ. ಇದಕ್ಕೆ ಸ್ಪಂದಿಸಿದರೆ ಟ್ಯಾಕ್ಸ್ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವಂತೆ ನಂಬಿಸಿ ವಂಚಿಸಲಾಗುತ್ತದೆ.
ಈ ರೀತಿಯ ಸೈಬರ್ ಅಪರಾಧಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುತ್ತೇವೆ. ಶಿವಪ್ರಕಾಶ ದೇವರಾಜು, ಎಸ್ಪಿ, ಉತ್ತರ ಕನ್ನಡ
ಕರೊನಾ ಸೋಂಕಿತರ ವೈಯಕ್ತಿಕ ವಿವರಗಳನ್ನು ಬಹಿರಂಗ ಮಾಡುವುದು ತಪ್ಪು. ಹಾಗೆ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸುದ್ದಿ ಹರಡಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ವಹಿಸುತ್ತೇವೆ. ಡಾ. ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ, ಉತ್ತರ ಕನ್ನಡ
ಇದನ್ನೂ ಓದಿ: ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್ ಸೋಂಕು! ಸಿಬ್ಬಂದಿ ಕೈವಾಡ: ಸೋಂಕಿತರ ಹೆಸರು, ಮೊಬೈಲ್ ಸಂಖ್ಯೆ ಮುಂತಾದ ದಾಖಲೆಗಳು ಸಾರ್ವಜನಿಕರಿಗೆ ಹರಿದಾಡುತ್ತಿರುವುದರ ಹಿಂದೆ ಇಲ್ಲಿನ ಸರ್ಕಾರಿ ಪ್ರಯೋಗಾಲಯದ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳ ಕೈವಾಡ ಇರುವ ಅನುಮಾನವಿದೆ. ಈ ಕುರಿತು ಕ್ರಮ ವಹಿಸುವಂತೆ ಅಚ್ಯುತಕುಮಾರ ಎಂಬುವವರು ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ.