

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಜತೆ ಖಾಸಗಿ ಸಂಸ್ಥೆಗಳು ಕೈಜೋಡಿಸುವ ಮೂಲಕ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಸಿಎಸ್‌ಆರ್) ನಿಧಿ ವಿನಿಯೋಗಿಸಲು ಮುಂದಾಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಸಿ-ಕ್ಯಾಂಪ್ ಸಹಯೋಗದಲ್ಲಿ ಆರೋಗ್ಯ ಇಲಾಖೆ ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಖಾಸಗಿ ಸಂಸ್ಥೆಗಳ ಮುಖ್ಯಸ್ಥರ ಜತೆ ದುಂಡುಮೇಜಿನ ಸಭೆ ನಡೆಸಿ, ಸಿಎಸ್‌ಆರ್ ಪಾಲುದಾರಿಕೆ ಕುರಿತು ಚರ್ಚಿಸಿದರು. ಹೊಸತನ ಹಾಗೂ ತಂತ್ರಜ್ಞಾನ ಅಳವಡಿಕೆಗೆ ಹೆಸರಾಗಿರುವ ರಾಜ್ಯದಲ್ಲಿ ಸೇವಾ ಮನೋಭಾವ ಹೊಂದಿರುವವರಿಗೆ ಹೇರಳ ಅವಕಾಶಗಳು ಇವೆ. ಸಮಾನಮನಸ್ಕ ಸಹಯೋಗಗಳು ಮತ್ತು ಪಾಲುದಾರಿಕೆ ಮೂಲಕ ಇದು ಸಾಧ್ಯವಾಗಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವವು ಹಣಕಾಸು ಒದಗಿಸುವ ಮೂಲಕ ನಮ್ಮ ಆರೋಗ್ಯ ಕ್ಷೇತ್ರವನ್ನು ಉತ್ತಮಗೊಳಿಸಲು ಮಹತ್ವದ ಪಾತ್ರ ವಹಿಸಬೇಕಿದೆ. ಇದರಿಂದ ರಾಜ್ಯದ ಪ್ರತಿ ವ್ಯಕ್ತಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಬಹುದು ಎಂದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಆಯುಕ್ತ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್, ಯುಎಸ್‌ಎಐಡಿ, ಇನ್ಫೋಸಿಸ್ ಫೌಂಡೇಶನ್, ಎಸಿಟಿ ಕ್ಯಾಪಿಟಲ್ ಫೌಂಡೇಷನ್, ಪಿಎಟಿಹೆಚ್, ಯುನಿಸೆಫ್, ನೊವೊ ನಾರ್ಡಿಸ್ಕ್ ಫೌಂಡೇಷನ್, ಬಯೋಕಾನ್ ಫೌಂಡೇಶನ್, ಸಿಪ್ಲಾ, ಜಿಇ ಹೆಲ್ತ್ ಕೇರ್, ಎಚ್‌ಸಿಎಲ್ ಫೌಂಡೇಷನ್ ಸೇರಿ ಹಲವು ಕಾರ್ಪೋರೇಟ್ ಸಂಸ್ಥೆಗಳ ಉದ್ಯಮಿಗಳು ಪಾಲ್ಗೊಂಡಿದ್ದರು.