

| ವಿಲಾಸ ಮೇಲಗಿರಿ ಬೆಂಗಳೂರು
ಕರೊನಾ ವೈರಸ್ ಈಗ ಎಲ್ಲೆಲ್ಲೂ ಭೀತಿ ಹುಟ್ಟಿಸಿದೆ. ಅದರಲ್ಲೂ ಗರ್ಭಿಣಿಯರಲ್ಲಿ ಭಯ ಇಮ್ಮಡಿಸಿದೆ. ಅನೇಕ ಮಹಿಳೆಯರು ಸೋಂಕಿನ ಕಾರಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೂಡ ಪಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಪ್ತಮಿತ್ರ ಪೋರ್ಟಲ್ ಮೂಲಕ ನೆರವಿನಹಸ್ತ ಚಾಚಿದೆ.
ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 9 ಲಕ್ಷ ಮಕ್ಕಳ ಜನನವಾಗುತ್ತಿದೆ. ಈ ಪೈಕಿ 7 ಲಕ್ಷ ಗರ್ಭಿಣಿಯರ ದೂರವಾಣಿ ಸಂಖ್ಯೆ ಇಲಾಖೆ ಬಳಿ ಇದೆ. ಇವರೆಲ್ಲರ ಆರೋಗ್ಯವನ್ನು ಪ್ರತಿ 15 ದಿನಕ್ಕೊಮ್ಮೆ ಐವಿಆರ್ಎಸ್ ಕರೆ ಮಾಡಿ ವಿಚಾರಿಸಲಾಗುತ್ತಿದೆ. ಪ್ರತಿನಿತ್ಯ 60 ಸಾವಿರ ಕರೆ ಮಾಡಲಾಗುತ್ತಿದೆ. ಈವರೆಗೆ 4,97,989 ಗರ್ಭಿಣಿಯರು ಆಪ್ತಮಿತ್ರ ಪೋರ್ಟಲ್ ಸವಲತ್ತು ಸದ್ವಿನಿಯೋಗ ಪಡೆದುಕೊಂಡಿದ್ದಾರೆ. ಆಪ್ತಮಿತ್ರ ಮೂಲಕ ಅವರ ಆರೋಗ್ಯದ ವಿಚಾರಣೆ ನಡೆಯುತ್ತದೆ. ಸಮಸ್ಯೆಗೆ ತಕ್ಕಂತೆ ಕರೆ ವರ್ಗಾವಣೆಯಾಗುತ್ತದೆ. ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ವೈದ್ಯರು ಈ ಕರೆಗಳನ್ನು ಸ್ವೀಕರಿಸಿ ಸಲಹೆ ಸೂಚನೆ ನೀಡುತ್ತಾರೆ. ಗರ್ಭಿಣಿಯರು ತಮ್ಮ ಸಮಸ್ಯೆಗಳಿಗೆ ಟೆಲಿ ಮೆಡಿಸಿನ್ ಮೂಲಕವೂ ಸೌಲಭ್ಯ ಪಡೆಯಬಹುದು.
ಮನೆ ಬಾಗಿಲಿಗೆ ಮೆಡಿಸಿನ್: ಗರ್ಭಿಣಿಯರಿಗೆ ಸಾಮಾನ್ಯವಾಗಿ ಬೇಕಾಗುವ ಐರನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಇಲ್ಲವೆ ಆರೋಗ್ಯ ಕಾರ್ಯಕರ್ತರ ಮೂಲಕ ಮನೆಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಗರ್ಭಿಣಿಯರ ಕಾಲು ಊದಿಕೊಂಡಿರುವ ಲಕ್ಷಣವಿದ್ದರೆ, ಆರೋಗ್ಯ ಸಹಾಯಕರು ಅವರ ಮನೆಗೇ ತೆರಳಿ ರಕ್ತದ ಒತ್ತಡ ಪರೀಕ್ಷಿಸಿ, ಅಗತ್ಯವಿದ್ದಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡುತ್ತಾರೆ.
ಕರೊನಾ ಪರೀಕ್ಷೆ: ಆಪ್ತಮಿತ್ರ ಪೋರ್ಟಲ್ಗೆ ಕರೆ ಮಾಡಿದ ಗರ್ಭಿಣಿಯರು ಜ್ವರ, ಕೆಮ್ಮು, ನೆಗಡಿ ಗಂಟಲು ನೋವು ಮತ್ತಿತರ ರೋಗ ಲಕ್ಷಣಗಳನ್ನು ಹೇಳಿಕೊಂಡರೆ ಮೊದಲ ಆದ್ಯತೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ. ಕರೊನಾ ಸೋಂಕು ದೃಢಪಟ್ಟಲ್ಲಿ ಪ್ರತ್ತೇಕ ವಾರ್ಡ್ನಲ್ಲಿ ಇರಿಸಿ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತದೆ. ಈ ಮೊದಲು ಗರ್ಭಿಣಿಯರಿಗೆ ಕರೊನಾ ಪರೀಕ್ಷೆ ವಿಳಂಬವಾಗುತ್ತಿತ್ತು. ಕೆಲವೊಮ್ಮೆ ಐದಾರು ದಿನ ವಿಳಂಬವಾದ ಉದಾಹರಣೆಗಳೂ ಇವೆ. ಇದರಿಂದ ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ಅಡ್ಡಿಯಾಗಿತ್ತು. ಈಗ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಸಂಬಂಧ ಎರಡು ದಿನಗಳಿಂದ ರ್ಯಾಪಿಡ್ ಆಂಟಿಜನ್ ಟೆಸ್ಟ್ ಕೂಡ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗುತ್ತಿದೆ.
ಜೂನ್ 30ರಿಂದ ಗರ್ಭಿಣಿಯರಿಗೆ ಆಪ್ತಮಿತ್ರ ಪೋರ್ಟಲ್ ಮೂಲಕ ಟೆಲಿ ಮೆಡಿಸಿನ್ ಸೌಲಭ್ಯ ಕಲ್ಪಿಸಲಾಗಿದೆ. ಕರೊನಾ ಉಪಟಳ ಸಂದರ್ಭದಲ್ಲಿ ಈ ಪೋರ್ಟಲ್ ಹೆಚ್ಚು ಪ್ರಯೋಜನಕಾರಿ. ಇನ್ಪೋಸಿಸ್ ಸಹಕಾರದೊಂದಿಗೆ ಈ ತಂತ್ರಜ್ಞಾನ ವಿನ್ಯಾಸಗೊಳಿಸಲಾಗಿದೆ. | ಡಾ.ರಾಜಕುಮಾರ್ ಉಪನಿರ್ದೇಶಕ, ತಾಯಿ ಆರೋಗ್ಯ- ಆರೋಗ್ಯ ಇಲಾಖೆ
ಸಹಾಯವಾಣಿ ಸಂಖ್ಯೆ 14410
ಗರ್ಭಿಣಿಯರು ತಮ್ಮ ಯಾವುದೇ ಆರೋಗ್ಯ ಸಮಸ್ಯೆಯನ್ನು ಆಪ್ತಮಿತ್ರ ಸಹಾಯವಾಣಿ 14410 ಕರೆ ಮಾಡಿ ಹೇಳಿಕೊಳ್ಳಬಹುದು. ಪೋರ್ಟಲ್ನಲ್ಲಿ ಸಹಾಯ ಕೇಳಿದ 350 ಗರ್ಭಿಣಿಯರಿಗೆ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಮೂಲಕ ಕಬ್ಬಿಣಾಂಶವುಳ್ಳ ಮಾತ್ರೆ, ಕ್ಯಾಲ್ಸಿಯಂ ಮಾತ್ರೆ ಒದಗಿಸಲಾಗಿದೆ.
ತಗ್ಗಿದ ತಾಯಂದಿರ ಮರಣ
ದಕ್ಷಿಣ ಭಾರತದ ರಾಜ್ಯಗಳ ಪೈಕಿ ತಾಯಂದಿರ ಮರಣ ಅಧಿಕವಾಗಿದ್ದ ಕರ್ನಾಟಕದಲ್ಲಿ ಮರಣ ಪ್ರಮಾಣ ತಗ್ಗಿದ್ದು, 2016-18ರ ಸಾಲಿನಲ್ಲಿ ಶೇ. 5.2 ಇಳಿಕೆಯಾಗಿದೆ. ಇದರೊಂದಿಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ 11ರಿಂದ 9ನೇ ಸ್ಥಾನಕ್ಕೆ ತಲುಪಿದೆ.
ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಜುಲೈನಲ್ಲಿ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ರಾಜ್ಯದಲ್ಲಿ 2014-2016ರಲ್ಲಿ ಒಂದು ಲಕ್ಷಕ್ಕೆ 108 ಇದ್ದ ತಾಯಂದಿರ ಮರಣ ಪ್ರಮಾಣ (ಎಂಎಂಆರ್) 2015-17ರಲ್ಲಿ 97 ತಲುಪಿತ್ತು. ಇದೀಗ 92ಕ್ಕೆ ಇಳಿದಿದೆ. ಇದು ತಾಯಂದಿರ ಜೀವ ಉಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಸಾಕ್ಷಿಯಾಗಿದೆ.
ರಾಜ್ಯವಾರು ಪಟ್ಟಿ: 2016-18ರಲ್ಲಿ ಪ್ರತಿ ಲಕ್ಷಕ್ಕೆ ಕೇರಳ-43, ಮಹಾರಾಷ್ಟ್ರ -46, ತಮಿಳುನಾಡು- 60, ತೆಲಂಗಾಣ- 63, ಆಂಧ್ರಪ್ರದೇಶ- 65, ಜಾರ್ಖಂಡ್-71, ಗುಜರಾತ್- 75, ಹರಿಯಾಣ- 91, ಕರ್ನಾಟಕ- 92 ತಾಯಂದಿರ ಮರಣ ಪ್ರಮಾಣವಿದ್ದು, ವಿಶ್ವ ಆರೋಗ್ಯ ಸಂಸ್ಥೆಯು 2030ರ ವೇಳೆಗೆ ಈ ಸಂಖ್ಯೆಯನ್ನು 70ಕ್ಕೆ ಇಳಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೈಕೆ ವಿಚಾರದಲ್ಲಿ ರಾಜ್ಯ ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕಿದೆ.