

ಬನ್ನೂರು: ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಕೃಷಿಯೊಂದಿಗೆ ಪಶುಪಾಲನೆಯನ್ನೂ ರೂಢಿಸಿಕೊಳ್ಳಬೇಕು ಎಂದು ಒಕ್ಕಲಿಗ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ ತಿಳಿಸಿದರು.ಪಟ್ಟಣದ ಮೇಗಲಕೊಪ್ಪಲಿನ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ಪಶುಪಾಲನಾ ಮತ್ತು ಪಶು ಸಂಗೋಪನಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನುವಾರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ಹೈನುಗಾರಿಗೆ ವೃದ್ಧಿಸಲು ರಾಸುಗಳ ಆರೋಗ್ಯ ಪಾಲನೆ ಅತ್ಯಂತ ಮುಖ್ಯ ಎಂದ ಅವರು, ರಾಸುಗಳ ಆರೋಗ್ಯ ವರ್ಧನೆಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವುಗಳ ಬಗ್ಗೆ ಅರಿತುಕೊಳ್ಳಬೇಕೆಂದು ರೈತರಿಗೆ ಕಿವಿ ಮಾತು ಹೇಳಿದರು.ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣ್ ಮಾತನಾಡಿ, ರೈತರು ಹೊಸ ತಳಿ ರಾಸುಗಳೊಂದಿಗೆ ದೇಶೀಯ ರಾಸು ಪಾಲನೆಗೂ ಗಮನ ನೀಡಬೇಕು ಎಂದರು.ಕುರಿ, ಕೋಳಿ, ಮೀನು, ಜೇನು ಸಾಕಣೆಯತ್ತಲೂ ಕೃಷಿಕರು ಗಮನ ಹರಿಸಬೇಕು. ಕುರಿ, ಕೋಳಿ ಗೊಬ್ಬರವನ್ನು ಬೆಳೆಗಳಿಗೆ ಬಳಸಿದರೆ ಉತ್ತಮ ಫಸಲು ಮತ್ತು ಆದಾಯ ಪಡೆದುಕೊಳ್ಳಬಹುದೆಂದು ತಿಳಿಸಿದರು. ಶಿಬಿರದಲ್ಲಿ ಚರ್ಮಗಂಟು ರೋಗದ ವಿರುದ್ಧ ಲಸಿಕೆ, ಕುರಿ ಮೇಕೆಗಳಿಗೆ ಈ ಟಿ ಲಸಿಕೆ, ಜಂತುನಾಶಕ ಔಷಧ ವಿತರಣೆ, ಬರಡು ಹಸು- ಎಮ್ಮೆಗಳ ತಪಾಸಣೆ ಮತ್ತು ಚಿಕಿತ್ಸೆ ನಡೆಯಿತು.ಡಾ.ಸಿ. ದಿವಾಕರ್, ಶಿವಕುಮಾರ್, ಹಾಲು ಒಕ್ಕೂಟದ ವೈದ್ಯಾಧಿಕಾರಿಗಳು ಇದ್ದರು. ಬನ್ನೂರು ಸಮೀಪದ ಮೇಗಲಕೊಪಲಿನ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನುವಾರು ಆರೋಗ್ಯ ತಪಾಸಣಾ ಶಿಬಿರದಲ್ಲಿ ರಾಸುಗಳ ಪರೀಕ್ಷೆ ನಡೆಯಿತು. ಡಾ.ಸಿ. ದಿವಾಕರ್, ನಾರಾಯಣ್, ಲಿಂಗರಾಜು ಸೇರಿದಂತೆ ಪ್ರಮುಖರು ಇದ್ದರು.