

ವಿರಾಜಪೇಟೆ: ಕೆಡಿಎಸ್ ಮುಸ್ಲಿಂ ಯೂತ್ ಚಾರಿಟಿ ಕಡಂಗ, ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂ, ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆ ಸಹಯೋಗದೊಂದಿಗೆ ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೃಹತ್ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.
ಶಿಬಿರವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಉದ್ಘಾಟಿಸಿ, ಸಂಘಟನೆ ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮ ಶ್ಲಾಘನೀಯವಾದದ್ದು, ನಿಮ್ಮ ಸಮಾಜಮುಖಿ ಕಾರ್ಯಕ್ರಮ ಇದೆ ರೀತಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಸೇವ್ ದಿ ಡ್ರಿಮ್ಸ್ ಚಾರಿಟಿಯ ಅಧ್ಯಕ್ಷ ಜಾಬಿರ್ ನಿಝಾಮಿ ಮಾತನಾಡಿ, ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಬಿರದಲ್ಲಿ 250ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಸ್ತ್ರೀರೋಗ ಹಾಗೂ ಪ್ರಸೂತಿ, ದಂತ ಚಿಕಿತ್ಸೆ, ಹೃದಯ ಪರೀಕ್ಷೆ ನಡೆಸಲಾಯಿತು.
ಅಲ್ ಅನ್ಸಾರ್ ಆಸ್ಪತ್ರೆಯ ವ್ಯವಸ್ಥಾಪಕ ಅಬ್ದುಲ್ ಕಲ್ಲಕ್, ಅಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂ ವಿರಾಜಪೇಟೆ ತಾಲೂಕು ಅಧ್ಯಕ್ಷ ಸಿ.ಎ.ಫತಾಯಿ, ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಂತಿ ಕುಮಾರಿ, ಕೆಡಿಎಸ್ ಚಾರಿಟಿಯ ಅಧ್ಯಕ್ಷ ಜುನೈದ್, ಎಐಎಂಡಿಎಫ್ ನ ಉಪಾಧ್ಯಕ್ಷ ಮೊಹಮ್ಮದ್, ಬಲ್ಟಿಕಳಂಡ ರಂಜಿ, ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್, ಮೊಯ್ಯದ್ದಿನ್ ಮಸೀದಿಯ ಅಧ್ಯಕ್ಷ ಕುಂಞದ್ದುಲ್ಲಾ, ಅಲ್ ಅನ್ಸಾರ್ ಆಸ್ಪತ್ರೆಯ ಮಾರ್ಕೆಟಿಂಗ್ ವ್ಯವಸ್ಥಾಪಕರಾದ ಸುಹೈಲ್ ಮುಕ್ರಮ್, ಗ್ರಾಪಂ ಸದಸ್ಯರಾದ ಸುಬೈರ್, ಕವಿತಾ ಪ್ರಕಾಶ್ ಮತಿತ್ತರರು ಉಪಸ್ಥಿತರಿದ್ದರು.