ಸಂಪಾದಕೀಯ: ಆರೋಗ್ಯ ಕಾಳಜಿ ಮುಖ್ಯ

ವಿಜಯವಾಣಿ (2)
Published on

ಜೀವನಶೈಲಿಯಲ್ಲಿ ಆಗಿರುವ ವ್ಯಾಪಕ ಬದಲಾವಣೆ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೆಚ್ಚಿಸಿದ್ದು, ಕಳವಳಕ್ಕೆ ಕಾರಣವಾಗಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಜನರ ಕೌಟುಂಬಿಕ ಬಜೆಟ್ ಕೂಡ ಏರುಪೇರಾಗುತ್ತಿದ್ದು, ಆರ್ಥಿಕ ಸಂಕಷ್ಟದ ಪ್ರಮಾಣ ಹೆಚ್ಚುತ್ತಿದೆ. ಹಿಂದೆಲ್ಲ ಹಿರಿಯರು ಆಹಾರವೇ ಔಷಧ ಎಂಬ ವಿವೇಚನೆಯಿಂದ ಉತ್ತಮ ಆಹಾರ ಪದ್ಧತಿ, ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು.

ಆಗ ಆಹಾರದ ಗುಣಮಟ್ಟವೂ ಉತ್ತಮವಾಗಿತ್ತು. ಈಗಿನಷ್ಟು ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆ ಇರಲಿಲ್ಲ. ಮತ್ತೊಂದೆಡೆ, ಫಾಸ್ಟ್​ಫುಡ್, ಬೀದಿಬದಿ ತಿಂಡಿ ಸೇರಿದಂತೆ ಅನಾರೋಗ್ಯವನ್ನು ಆಹ್ವಾನಿಸುವ ಆಹಾರ ಸೇವನೆ ತಂದೊಡ್ಡುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಈ ಸಮಸ್ಯೆಗಳ ಬಗ್ಗೆ ಕಾಲಕಾಲಕ್ಕೆ ಆರೋಗ್ಯ ತಜ್ಞರು ಮಾತನಾಡುತ್ತ, ಎಚ್ಚರಿಸುತ್ತಲೇ ಬಂದಿದ್ದಾರೆ. ಈ ಸಮಸ್ಯೆಯ ಗಂಭೀರತೆಯ ಬಗ್ಗೆ ಜನರ ಗಮನ ಸೆಳೆಯಲು ಈಗ ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಬಾನುಲಿ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಪ್ರಮುಖ ಸಂಗತಿಗಳನ್ನು ಪ್ರಸ್ತಾಪಿಸಿ, ಮಹತ್ವದ ಸಲಹೆಗಳನ್ನೂ ನೀಡಿದ್ದಾರೆ.

‘ಜಗತ್ತಿನಾದ್ಯಂತ ಜನರಲ್ಲಿ, ಅದರಲ್ಲೂ ಮಕ್ಕಳಲ್ಲಿ ಬೊಜ್ಜು ಪ್ರಮಾಣ ಹೆಚ್ಚುತ್ತಿದೆ. ಅಧ್ಯಯನವೊಂದರ ಪ್ರಕಾರ ಎಂಟು ಜನರ ಪೈಕಿ ಒಬ್ಬರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2022ರಲ್ಲಿ ಜಾಗತಿಕವಾಗಿ 250 ಕೋಟಿ ಜನರು ತಮ್ಮ ಎತ್ತರಕ್ಕೆ ಸರಿಯಾಗಿ ಇರಬೇಕಾದ ತೂಕಕ್ಕಿಂತ ಅಧಿಕ ತೂಕ ಹೊಂದಿದ್ದಾರೆ.

ಈ ಅಂಕಿ-ಸಂಖ್ಯೆ ಬಹಳ ಗಂಭೀರವಾದುದು, ಚಿಂತೆಗೀಡು ಮಾಡುವಂಥವು’ ಎಂದಿರುವ ಪ್ರಧಾನಿ, ‘ಬೊಜ್ಜು ಕೇವಲ ವೈಯಕ್ತಿಕ ವಿಚಾರವಲ್ಲ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಕುಟುಂಬದೆಡೆಗಿನ ನಮ್ಮ ಜವಾಬ್ದಾರಿ ಕೂಡ’ ಎಂದಿದ್ದಾರೆ. ಅಲ್ಲದೆ, ‘ಬೊಜ್ಜು ಕಡಿಮೆ ಮಾಡಿಕೊಳ್ಳಲು ಮತ್ತು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಅಡುಗೆ ಎಣ್ಣೆ ಬಳಕೆಯಲ್ಲಿ ಪ್ರತಿ ತಿಂಗಳು ಶೇಕಡ 10ರಷ್ಟು ಕಡಿತ ಮಾಡಿ. ಇದನ್ನು ಸವಾಲಾಗಿ ಸ್ವೀಕರಿಸಿ. ಏಕೆಂದರೆ, ಅಧಿಕ ಅಡುಗೆ ಎಣ್ಣೆ ಬಳಕೆಯಿಂದ ಹೃದಯ ಕಾಯಿಲೆ, ಮಧುಮೇಹ ಮತ್ತು ಅಧಿಕ ಒತ್ತಡಗಳಂಥ ರೋಗಗಳು ಬರುತ್ತಿವೆ’ ಎಂದಿದ್ದಾರೆ.

ಪ್ರಧಾನಿ ನೀಡಿರುವ ಎಚ್ಚರಿಕೆ ದನಿಯ ಸಲಹೆ ಸಕಾಲಿಕವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನರು ಮತ್ತು ಮಕ್ಕಳು ದಿಢೀರ್ ಹೃದಯಾಘಾತ ಹಾಗೂ ಹೃದಯಸ್ತಂಭನಕ್ಕೆ ಬಲಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಕಾಯಿಲೆ ಬಂದ ಬಳಿಕ ಔಷಧ ಸೇವಿಸುವುದು, ಅದಕ್ಕಾಗಿ ದೊಡ್ಡ ಮೊತ್ತವನ್ನು ವಿನಿಯೋಗಿಸುವುದಕ್ಕಿಂತ ಆಹಾರ ಪದ್ಧತಿಯಲ್ಲೇ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ. ಸಣ್ಣಪುಟ್ಟ ಮಾರ್ಪಾಡುಗಳಿಂದ ಜೀವನಶೈಲಿಯನ್ನು ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯಕ್ಕೆ ಮಾರಕವಾದ ಸಂಗತಿಗಳನ್ನು ದೂರ ಮಾಡಬೇಕು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌಲ್ಯಯುತ ಸಲಹೆಗಳನ್ನು ಜನರು ಅನುಷ್ಠಾನಕ್ಕೆ ತಂದಲ್ಲಿ, ಆರೋಗ್ಯಕರ ಸಮಾಜ ನಿರ್ವಣದ ಆಶಯಕ್ಕೆ ಪೂರಕವಾಗಿ ಪರಿಣಮಿಸಬಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net