ಗಣೇಶನಿಗೆ ಪ್ರಿಯವಾದ ಕಡಲೆಯ ಗುಣ, ಪ್ರಯೋಜನ

ವಿಜಯವಾಣಿ-7-2
Published on
ಗಣೇಶ ಚೌತಿ ತುಂಬಾ ಹತ್ತಿರದಲ್ಲಿದೆ. ಹಲವು ಕಡೆಗಳಲ್ಲಿ ಗಣೇಶ ಚೌತಿಯಂದು ಗಣೇಶನಿಗೆ ನೈವೇದ್ಯ ಮಾಡುವಾಗ ನೆನೆಸಿದ ಕಡಲೆಯನ್ನು ಕೂಡ ಇಡುತ್ತಾರೆ. ಇಂದು ಗಣೇಶನಿಗೆ ಪ್ರಿಯವಾದ ಕಡಲೆಯ ಗುಣ ಮತ್ತು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಒಗರು ರುಚಿಯನ್ನು, ತಂಪು, ಲಘು ಮತ್ತು ಒಣ ಗುಣಗಳನ್ನು ಹೊಂದಿರುವ ಕಡಲೆಯು ಪಿತ್ತ ಮತ್ತು ಕಫ ದೋಷಗಳನ್ನು ನಿಯಂತ್ರಿಸಿದರೆ ವಾತ ದೋಷವನ್ನು ಹೆಚ್ಚಿಸುತ್ತದೆ. ಇದು ಹಲವಾರು ಕಾಯಿಲೆಗಳಲ್ಲಿ ಆಹಾರವಾಗಿ ಮತ್ತು ಕೆಲವು ಸಮಸ್ಯೆಗಳಲ್ಲಿ ಔಷಧವಾಗಿ ತುಂಬಾ ಲಾಭದಾಯಕ. ‘ಭಾವ ಪ್ರಕಾಶ ನಿಘಂಟು’ ಎಂಬ ಗ್ರಂಥದಲ್ಲಿ ಇದು ಜ್ವರದಲ್ಲಿ ತುಂಬಾ ಅನುಕೂಲಕರ ಎಂದು ಹೇಳಿದ್ದಾರೆ. ನೀರಿನಲ್ಲಿ ಬೇಯಿಸಿದರೆ ಇದು ಬಲವನ್ನು ಹೆಚ್ಚಿಸುತ್ತದೆ ಎಂದು ಈ ಗ್ರಂಥದಲ್ಲಿ ಹೇಳಲಾಗಿದೆ. ಪಿತ್ತದಿಂದ ಆಗುತ್ತಿರುವ ವಾಂತಿ, ಉರಿ, ತಲೆನೋವಿನ ಸಮಸ್ಯೆಯಲ್ಲಿ ಕಡಲೆ ಹಿಟ್ಟು ಮತ್ತು ಅಮೃತಬಳ್ಳಿಯ ತುಂಡುಗಳಿಗೆ ನೀರು ಹಾಕಿ ರಾತ್ರಿಯಿಡೀ ಇಟ್ಟು ಬೆಳಿಗ್ಗೆ ಆ ನೀರನ್ನು ಸೇವಿಸಬೇಕು ಎಂದು ‘ಚರಕ ಸಂಹಿತೆ’ಯಲ್ಲಿ ಹೇಳಿದ್ದಾರೆ. ಕಡಲೆ ಹಿಟ್ಟಿನಿಂದ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವುದು ಮಕ್ಕಳ ಚರ್ಮದ ಆರೋಗ್ಯದ ದೃಷ್ಟಿಯಿಂದ ತುಂಬಾ ಅನುಕೂಲಕರ. ಅದರ ಜೊತೆಗೆ ತ್ರಿಫಲಾ ಚೂರ್ಣ, ಮಂಜಿಷ್ಟ ಮತ್ತು ಸೊಗದೆ ಬೇರಿನ ಪುಡಿಗಳನ್ನು ಸೇರಿಸಿ ಸ್ನಾನ ಚೂರ್ಣವಾಗಿ ಬಳಸಿದರೆ ಚರ್ಮದ ಆರೋಗ್ಯ ಚೆನ್ನಾಗಿ ಹೆಚ್ಚುತ್ತದೆ. ಕಡಲೆಹಿಟ್ಟಿನ ಜೊತೆ ಸ್ವಲ್ಪ ರಕ್ತ ಚಂದನದ ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಮಾಡಿಕೊಂಡು ಬೆಚ್ಚನೆಯ ನೀರಿನಿಂದ ತೊಳೆದರೆ ಜಿಡ್ಡು ಇರುವ ಚರ್ಮಕ್ಕೆ ತುಂಬಾ ಅನುಕೂಲವಾಗುತ್ತದೆ.

ಕಡಲೆ ಪೋಷಕಾಂಶಗಳಿಂದ ಸಂಪದ್ಭರಿತವಾಗಿದೆ. ಪೋ›ಟೀನ್ ಹೇರಳವಾಗಿ ಇರುವ ಕಾರಣ ಇದನ್ನು ಊಟದಲ್ಲಿ ಬಳಸಲೇಬೇಕು. ಜೊತೆಗೆ ಇದರಲ್ಲಿ ಮ್ಯಾಂಗನೀಸ್, ವಿಟಮಿನ್ ಬಿ9, ತಾಮ್ರ, ಕಬ್ಬಿಣ, ಝಿಂಕ್, ಫಾಸ್ಪರಸ್, ಮ್ಯಾಗ್ನಿಷಿಯಂ, ವಿಟಮಿನ್ ಬಿ6, ಸೆಲೆನಿಯಂ ಮತ್ತು ಪೊಟ್ಯಾಷಿಯಂಗಳು ಒಳ್ಳೆಯ ಪ್ರಮಾಣದಲ್ಲಿ ಸಿಗುತ್ತವೆ. ಅದರಲ್ಲಿಯೂ ಮ್ಯಾಂಗನೀಸ್ ಹೇರಳವಾಗಿ ಸಿಗುವ ದ್ರವ್ಯವೆಂದರೆ ಅದು ಕಡಲೆ. ಪೋ›ಟೀನ್ ಮತ್ತು ನಾರಿನ ಅಂಶ ಹೆಚ್ಚಿರುವ ಕಾರಣ ಇದನ್ನು ಸೇವಿಸಿದಾಗ ಹೊಟ್ಟೆ ತುಂಬಿರುವ ಅನುಭವ ಬಹಳ ಹೊತ್ತು ಇರುತ್ತದೆ. ಇದರಿಂದಾಗಿ ಬೊಜ್ಜು ಮುಂತಾದ ಸಮಸ್ಯೆಗಳು ಕಡಿಮೆಯಾಗಲು ಸಹಾಯವಾಗುತ್ತದೆ. ಸಸ್ಯಹಾರಿಗಳಿಗೆ ಪೋ›ಟೀನ್ ಸುಲಭವಾಗಿ ಸಿಗದ ಕಾರಣ ಕಡಲೆ ತುಂಬಾ ಸೂಕ್ತವಾದ ಪೋ›ಟೀನ್ ಮೂಲವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಪೊ›ಟೀನ್ ಮತ್ತು ನಾರಿನಂಶ ಇರುವ ಕಾರಣದಿಂದ ಮತ್ತು ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಹೊಂದಿರುವ ಕಾರಣ ಇದು ಮಧುಮೇಹಿಗಳಿಗೆ ತುಂಬಾ ಸೂಕ್ತವಾದ ಆಹಾರ ಪದಾರ್ಥವಾಗಿದೆ. ಒಂದಷ್ಟು ಮಟ್ಟಿಗೆ ಇದು ಸಕ್ಕರೆಯ ಪ್ರಮಾಣವನ್ನು ಕೂಡಾ ಕಡಿಮೆ ಮಾಡುತ್ತದೆ. ಕೆಲವು ರೀತಿಯ ಐಬಿಎಸ್ ಸಮಸ್ಯೆ ಇರುವವರಿಗೆ ಮತ್ತು ದೊಡ್ಡ ಕರುಳಿನ

ಕ್ಯಾನರ್ ಇರುವವರಿಗೆ ಕೂಡ ಇದು ಅನುಕೂಲಕರ ಎಂದು ಸಂಶೋಧನೆ ಹೇಳುತ್ತದೆ. ಕೊಲೈನ್ ಹೇರಳವಾಗಿರುವ ಕಾರಣ ಇದು ಮಿದುಳಿನ ಆರೋಗ್ಯಕ್ಕೆ ಕೂಡ ತುಂಬಾ ಅನುಕೂಲಕರ. ಮಿದುಳಿನ ಜೀವಕೋಶಗಳ ಆರೋಗ್ಯವನ್ನು ಹೆಚ್ಚಿಸಲು ಮತ್ತು ಕೆಲವು ವಿಶೇಷ ನರದ ಸಂವಹನ ಮಾಡುವ ಕ್ರಿಯೆಗಳನ್ನು ಉತ್ತಮ ಪಡಿಸಲು ಇದು ಸಹಾಯಕ. ಮ್ಯಾಗ್ನೆಸಿಯಂ ಹೇರಳವಾಗಿರುವ ಕಾರಣ ನರದ ಕಾರ್ಯಕ್ಷಮತೆಯನ್ನು ಕೂಡ ಇದು ಹೆಚ್ಚಿಸುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ಉದ್ವೇಗವನ್ನು ಕಡಿಮೆ ಮಾಡಲು ಕೂಡ ಇದು ಅನುಕೂಲಕರ. ಕಬ್ಬಿಣದ ಅಂಶ ಹೇರಳವಾಗಿರುವ ಕಾರಣ ಇದನ್ನು ನಿತ್ಯ ಸೇವಿಸುವವರಿಗೆ ರಕ್ತಹೀನತೆಯ ಸಾಧ್ಯತೆ ಕಡಿಮೆಯಾಗುತ್ತದೆ.

ಬೇರೆ ಬೇಳೆ ಕಾಳುಗಳಂತೆಯೇ ಕಡಲೆ ಕೂಡಾ ಗ್ಯಾಸ್ ಟ್ರಬಲ್​ಗೆ ಕಾರಣವಾಗಬಹುದು. ಹಾಗಾಗಿ ಕಡಲೆಯನ್ನು ನೀರಿನಲ್ಲಿ ನೆನೆಸಿ ನಂತರ ಬೇಯಿಸಿ ಸೇವಿಸುವುದು ಹೆಚ್ಚು ಒಳ್ಳೆಯದು. ಕಡಲೆಯನ್ನು ಬೇಯಿಸುವಾಗ ಜೊತೆಗೆ ಜೀರಿಗೆ, ಶುಂಠಿ, ಅಜವಾನ್​ಗಳನ್ನು ಸೇರಿಸಿದರೆ ಗ್ಯಾಸ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ವಾತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಕಡಲೆಯನ್ನು ಅತಿಯಾಗಿ ಸೇವಿಸುವುದು ಸರಿಯಲ್ಲ. ಒಂದು ವೇಳೆ ಸೇವಿಸುವುದಿದ್ದರೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ತುಪ್ಪವನ್ನು ಕೂಡ ಸೇವಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net