ಬಿಸಿಯೂಟ ಅಕ್ಕಿ ಮಾರಿದ ಆರೋಪ ಮುಖ್ಯ ಶಿಕ್ಷಕಿ ಅಮಾನತ್ತು

Midday Meals
Published on

ರಾಮನಗರ : ಬಿಸಿಯೂಟದ ಅಕ್ಕಿ, ಬೇಳೆ, ಹಾಲಿನ ಪುಡಿಯನ್ನು ಮಾರಾಟ ಮಾಡಿದ ಆರೋಪದ ಮೇಲೆ ರಾಮನಗರದ ಮೆಹಬೂಬ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರಜೀಯಾ ಬೇಗಂ ಅವರನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ಸ್ವಾಮಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

 ಕೃತ್ಯಕ್ಕೆ ಸಹಕರಿಸಿದ ಶಾಲೆಯ ಮುಖ್ಯ ಅಡುಗೆ ತಯಾರಕಿ ಮುಬಿನ್ ತಾಜ್ ಅವರನ್ನ ಕೆಲಸದಿಂದ ವಜಾಗೊಳಿದ್ದಾರೆ. 

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ ನೀಡಿದ್ದ 55 ಕೆ.ಜಿ ಅಕ್ಕಿ, 32 ಕೆ.ಜಿ ಬೆಳೆ, 3 ಕೆ.ಜಿ ಹಾಲಿನ ಪುಡಿ ಹಾಗೂ 5 ಖಾಲಿ ಚೀಲಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಸೆ. 12ರಂದು ಆಟೊದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. 

ಈ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೊಮಲಿಂಗಯ್ಯ ಅಕ್ಷರ ದಾಸೋಹದ ಅಧಿಕಾರಿಗಳಾದ ಪ್ರಸನ್ನ, ಸಂತೋಷ್ ಅವರ ತಂಡ ಆಟೊ ತಡೆದು ಪರಿಶೀಲಿಸಿ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಕುರಿತು ಪರಿಶೀಲಿಸಿ ವರದಿ ನೀಡಲು ಉಪ ನಿರ್ದೇಶಕರು ಮೂವರ ಸಮಿತಿಯನ್ನು ನೇಮಿಸಿದ್ದರು.

ಸಮಿತಿ ನೀಡಿದ ವರದಿಯಲ್ಲಿ ಆಹಾರ ಪದಾರ್ಥ ಸಾಗಣೆಯಲ್ಲಿ ಮುಖ್ಯ ಶಿಕ್ಷಕಿ ರಜೀಯಾ ಬೇಗಂ ಮತ್ತು ಮುಖ್ಯ ಅಡುಗೆ ತಯಾರಕಿ ಮುಬಿನ್ ತಾಜ್ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಹಾಗಾಗಿ, ಬೇಗಂ ಅವರನ್ನು ಅಮಾನತುಗೊಳಿಸಿ, ಇಲಾಖೆ ವಿಚಾರಣೆ ಕಾಯ್ದಿರಿಸಿ ಸೆ. 23ರಂದು ಆದೇಶ ಹೊರಡಿಸಿದ್ದಾರೆ.  ಅಲ್ಲದೆ, ಮುಬಿನ್ ತಾಜ್ ಅವರನ್ನು ಕೆಲಸದಿಂದ ತೆಗೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net