ಲೋಕಾಯುಕ್ತ ಬಲೆಗೆ ಬಿದ್ದ ಹೆಡ್ ಕಾನ್‌ಸ್ಟೇಬಲ್

karnataka-lokayukta.jpg
Published on

ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಹಣಕ್ಕೆ ಬೇಡಿಕೆಯಿಟ್ಟು 50 ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಾಜಿನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಆಂಜನೇಯ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ.


ನಾಗರಭಾವಿ ನಿವಾಸಿಯಾದ ಸಾಗರ್ ವಿರುದ್ದ ಮಹಿಳೆಯೊಬ್ಬರು ಕಾರಿನ ವಿಚಾರಕ್ಕೆ ಸಂಬಂಧಿಸಿದಂತೆ ಜೂ.೨೫ ರಂದು ಸಾಗರ್ ಮತ್ತು ಆತನ ತಂದೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಎ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದರು. ಆದರೆ ಕೋರ್ಟ್ ಬಿ ರಿಪೋರ್ಟ್ ಸಲ್ಲಿಸಬೇಕಾದರೆ ೫೦ ಸಾವಿರ ಲಂಚ ಕೊಡುವಂತೆ ಇನ್‌ಸ್ಪೆಕರ್ ಲಕ್ಷ್ಮಣ್ ಗೌಡ, ಸಬ್ ಇನ್‌ಸ್ಪೆಕ್ಟರ್ ಮಾರುತಿ, ಹೆಡ್ ಕಾನ್‌ಸ್ಟೇಬಲ್ ಆಂಜನೇಯ ಅವರು ಆರೋಪಿ ಸಾಗರ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ ಲಂಚ ನೀಡಲು ಇಷ್ಟವಿಲ್ಲದ ಸಾಗರ್ ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಬಸವರಾಜ್ ಪುಲಾರಿ ನೇತೃತ್ವದ ತಂಡ ರಾಜಾಜಿನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಆಂಜನೇಯ ಅವರು ೫೦ ಸಾವಿರ ರೂ. ಲಂಚ ಸ್ವೀಕರಿಸುವಾಗ ಸಾಕ್ಷಿ ಸಮೇತ ವಶಕ್ಕೆ ಪಡೆದಿದ್ದಾರೆ.


ಪ್ರಕರಣದಲ್ಲಿ ಸಬ್ ಇನ್‌ಸ್ಪೆಕ್ಟರ್ ಮಾರುತಿ, ಇನ್‌ಸ್ಪೆಕರ್ ಲಕ್ಷ್ಮಣ್ ಗೌಡ ಸಹ ಆರೋಪಿಯಾಗಿದ್ದು ಲೋಕಾಯುಕ್ತ ಪೊಲೀಸರ ದಾಳಿ ವೇಳೆ ತಲೆಮರೆಸಿಕೊಂಡಿದ್ದಾರೆ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಪಿಎಸ್‌ಐ ಮಾರುತಿ, ಇನ್‌ಸ್ಪೆಕ್ಟರ್ ಲಕ್ಷ್ಮಣ್ ಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ೫೦ ಸಾವಿರ ರೂ.ಲಂಚದ ಹಣ ಪಡೆಯುವಾಗ ಪ್ರಕರಣದ ಪ್ರಮುಖ ಆರೋಪಿ ಆಂಜನೇಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net