

ಬೆಂಗಳೂರು: ಎಸ್.ಎಂ ಕೃಷ್ಣ ನನಗೆ ತಂದೆ ಸಮಾನರು. ನನ್ನ ಬದುಕಿನಲ್ಲಿ ಆಗಿರುವ ಬದಲಾವಣೆ ಅವರ ಮಾರ್ಗದರ್ಶನಕ್ಕೆ ಸಾಕ್ಷಿ. ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಎಸ್.ಎಂ ಕೃಷ್ಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(DK ShivaKumar) ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಭಾವುಕರಾಗಿ ಜತೆ ಮಾತನಾಡಿದರು.
ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದರು. ಎಸ್.ಎಂ ಕೃಷ್ಣ ವಿಕಾಸ ಸೌಧ ಕಟ್ಟಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ನೀಡಿದರು. ಅವರ ಕಡೆಯ ಬಜೆಟ್ ಗಾತ್ರ 26 ಸಾವಿರ ಕೋಟಿ ರೂ. ಆದರೆ ಇಂದು ನಮ್ಮ ರಾಜ್ಯದ ಬಜೆಟ್ ಗಾತ್ರ 3.83 ಲಕ್ಷ ಕೋಟಿ. ಆಮೂಲಕ ರಾಜ್ಯಕ್ಕೆ ಆರ್ಥಿಕ ಶಕ್ತಿ ತುಂಬಿದರು. ರಾಜ್ಯ ವಿಕಾಸವಾಗಲಿ ಎಂದು ವಿಕಾಸಸೌಧ, ಎಲ್ಲರಿಗೂ ಉದ್ಯೋಗ ಸಿಗಲಿ ಎಂದು ಉದ್ಯೋಗ ಸೌಧ ಕಟ್ಟಿದರು. ರಾಜ್ಯದಲ್ಲಿ ಪಾನೀಯ ನಿಗಮ ಸ್ಥಾಪಿಸಿ ರಾಜ್ಯದ ಬೊಕ್ಕಸಕ್ಕೆ ಹಣ ಬರುವಂತೆ ಮಾಡಿದರು ಎಂದರು.
ಬೆಂಗಳೂರನ್ನು ಐಟಿ ರಾಜಧಾನಿಯಾಗಿ ಮಾಡಿ ಜಾಗತಿಕ ಮಟ್ಟದಲ್ಲಿ ಮೀನುಗುವಂತೆ ಮಾಡಿದರು. ದಕ್ಷ ಆಡಳಿತಕ್ಕೆ ಅವರು ಮಾದರಿಯಾಗಿದ್ದರು. ಬೆಂಗಳೂರು ಅಭಿವೃದ್ಧಿ, ಇಲ್ಲಿನ ಉದ್ಯೋಗ ಸೃಷ್ಟಿ ಸೇರಿದಂತೆ ಅವರ ಸಾಧನೆಗೆ ನಿಮ್ಮ ಕಣ್ಣುಗಳೇ ಸಾಕ್ಷಿ ಎಂದರು.
ಅವರು ನನ್ನ ಸಂಬಂಧಿ, ನನ್ನ ರಾಜಕೀಯ ಮಾರ್ಗದರ್ಶಕರು ಎಂಬುದು ಬೇರೆ ವಿಚಾರ. ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ಅವರು ನಮಗೆಲ್ಲ ದೊಡ್ಡ ಪರಂಪರೆ ಬಿಟ್ಟುಹೋಗಿದ್ದು, ನಾವು ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅವರಿಂದ ಸಾಕಷ್ಟು ವಿಚಾರ ಕಲಿತ ಹೆಮ್ಮೆ ನಮಗಿದೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ನನ್ನ ಅವರ ನಡುವಣ ಸಂಬಂಧದ ಬಗ್ಗೆ ಬೇರೆ ದಿನ ಮಾತನಾಡುತ್ತೇನೆ ಎಂದು ತಿಳಿಸುತ್ತೇನೆ ಎಂದರು.