ನೂರು ಯೋಜನ ದೂರ ಗದೆ ಎಸೆದ!

untitled-design-1-6908e54336e77
Published on
ಜರಾಸಂಧ ಸಾಮಾನ್ಯನಲ್ಲ. ಇವನು ವಿಪ್ರಚಿತ್ತಿ ಎಂಬ ಮಹಾದೈತ್ಯ. ಇವನಿಗೆ ಬ್ರಹ್ಮದೇವರ ವರ, ರುದ್ರದೇವರ ವರ. ದೂರ್ವಾಸರ ವರ- ಹೀಗೆ ಮೂರು ವರಗಳು. ಆದ್ದರಿಂದ ಆತ ಅವಧ್ಯನಾಗಿದ್ದಾನೆ.

ಇಂತಹ ಮಹಾಬಲಿಷ್ಠನಾದ ಜರಾಸಂಧನ ಶಕ್ತಿ ಎಷ್ಟು ಎಂದರೆ, ಒಮ್ಮೆ ಆಸ್ತಿ ಪ್ರಾಸ್ತಿಯರು ಬಂದು, ಕಂಸ ಸತ್ತು ಹೋದ. ಕಂಸನನ್ನು ಕೊಂದವ ಶ್ರೀಕೃಷ್ಣ ಎನ್ನುತ್ತಾರೆ. ಆಗ ಜರಾಸಂಧ ತನ್ನ ಗದೆಯನ್ನು ತಗೆದುಕೊಂಡು ಅದನ್ನು ತಿರುಗಿಸಲು ಆರಂಭಿಸುತ್ತಾನೆ. ಅಷ್ಟು ಹೊತ್ತಿಗೆ ನಾರದರು ಬರುತ್ತಾರೆ. ಜರಾಸಂಧ, ‘ನಾರದರೇ, ಈ ಗುರಿ ಕೃಷ್ಣನ ತಲೆಯ ಮೇಲೆ ಬೀಳಬೇಕು. ಈಗ ಕೃಷ್ಣ ಎಲ್ಲಿ ಇದ್ದಾನೆ ಹೇಳಿ’ ಎಂದು ಕೇಳಿದ. ನಾರದರು ಹೇಳುತ್ತಾರೆ: ‘ಇಲ್ಲಿಂದ ಸರಿಯಾಗಿ ನೂರು ಯೋಜನ ದೂರದಲ್ಲಿ ಕೃಷ್ಣ ಕುಳಿತಿದ್ದಾನೆ. ಅಲ್ಲಿಗೆ ಸರಿಯಾಗಿ ನಿನ್ನ ಗದೆ ಒಗಿ’. ಜರಾಸಂಧ ನೂರು ಯೋಜನೆಗೆ ಗದೆಯನ್ನು ಎಸೆದ. ಅದು ಸರಿಯಾಗಿ ಅವನ ತಾಯಿ ಜರಾಳ ತಲೆಯ ಮೇಲೆ ಬಂದು ಬಿದ್ದಿತು. ಅವಳು ಸತ್ತು ಬಿದ್ದಳು.

ಅವಳು ಮಹಾದುಷ್ಟಳು. ಅವಳನ್ನು ಬೇರೆ ಯಾರೂ ಕೇಳುವಂತಿಲ್ಲ. ಆದ್ದರಿಂದಲೇ ನಾರದರು, ದುಷ್ಟ ಜರಾಸಂಧನು ಇನ್ನು ಸ್ವಲ್ಪದಿನಗಳಲ್ಲಿ ಸತ್ತು ಹೋಗುತ್ತಾನೆ. ಹಾಗಾದರೆ ಇವಳನ್ನು ಕೊಲ್ಲಲು ಮತ್ತೆ ಯಾರಿಗಾದರೂ ತೊಂದರೆ ಕೊಡಬೇಕು. ಅವಳ ಮಗನಿಂದಲೇ ಅವಳನ್ನು ಕೊಲ್ಲಿಸೋಣ ಎಂದು ಭಾವಿಸಿ ಹಾಗೆ ಮಾಡುತ್ತಾರೆ. ಜರಾಸಂಧನ ತಾಯಿ ಜರಾ. ನರಮಾಂಸ ಭಕ್ಷಕಳಾದ ಜರೆಯು ಬದುಕಿದ್ದರೆ ಅಮಾಯಕರು ಸಾಯುತ್ತಾರೆ. ಶ್ರೀಕೃಷ್ಣನಿಗೆ ಜರಾಸಂಧನ ಗದೆಯಿಂದ ಏನೂ ಆಗುವುದಿಲ್ಲ ಎನ್ನುವುದು ನಿಶ್ಚಯವಾಗಿದ್ದರೂ ಈ ರೀತಿಯಾಗಿ ವಿಭಿನ್ನವಾಗಿ ಶ್ರೀಕೃಷ್ಣನ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ನಾರದರು ನೂರು ಯೋಜನ ಎಂದು ಹೇಳಿದರು. ಆದರೆ ಶ್ರೀಕೃಷ್ಣ ನೂರ ಒಂದು ಯೋಜನ ದೂರದಲ್ಲಿ ಕುಳಿತಿದ್ದ. ಜರಾಸಂಧನ ಬಲಯುತವಾದ ಗದೆಯು ನೂರು ಯೋಜನ ದೂರದಲ್ಲಿ ಕುಳಿತ ಜರೆಯನ್ನು ಸಂಹರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net