ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಂದ

Crime Logo
Published on

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಫೈನಾನ್ಸಿಯರ್‌ವೊಬ್ಬನನ್ನು ಸ್ನೇಹಿತನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಶ್ರೀರಾಮಪುರದ ಸಾಯಿಬಾಬನಗರ ನಿವಾಸಿ ಕುಮಾರ್(೩೮) ಕೊಲೆಯಾದವ. ಕೃತ್ಯ ಎಸಗಿದ ಆರೋಪಿ ದಯಾಳ್(೪೬) ಎಂಬಾತನನ್ನು ಘಟನೆ ನಡೆದ ಕೆಲವೇ ಗಂಟೆಯಲ್ಲೇ ಬಂಧಿಸಲಾಗಿದೆ. ಮಂಗಳವಾರ ಮುಂಜಾನೆ ೨.೩೦ರ ಸುಮಾರಿಗೆ ಓಕಳೀಪುರದ ನ್ಯೂಕಾಳಪ್ಪ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಕುಮಾರ್ ಮತ್ತು ಆರೋಪಿ ದಯಾಳ್ ಸುಮಾರು ೧೫ ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ದಯಾಳ್ ಫೈನಾನ್ಸಿಯರ್ ಆಗಿದ್ದರೆ, ಕುಮಾರ್ ಮನೆ ಸಮೀಪದಲ್ಲೇ ಹೋಟೆಲ್ ಇಟ್ಟುಕೊಂಡಿದ್ದ. ಇಬ್ಬರು ಸಾಯಿಬಾಬನಗರದಲ್ಲೇ ಕುಟುಂಬ ಸಮೇತ ವಾಸವಾಗಿದ್ದರು. ಆರೋಪಿ ದಯಾಳ್ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರಿಂದ ಈತನಿಂದ ಕುಮಾರ್, ಕಳೆದ ೧೦ ವರ್ಷದಲ್ಲಿ ಮನೆ ನಿರ್ಮಾಣ, ಹೋಟೆಲ್ ಅಭಿವೃದ್ಧಿ ಪಡಿಸಬೇಕೆಂದು ಹಂತ ಹಂತವಾಗಿ ೬೫ ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಆದರೆ, ಮತ್ತೊಂದೆಡೆ ಬೇರೆ ಬೇರೆ ಕಡೆಯಿಂದ ಲಕ್ಷಾಂತರ ರೂ. ಸಾಲ ಪಡೆದು ಕುಮಾರ್‌ಗೆ ಹಣ ನೀಡಿದ್ದರಿಂದ, ಆರೋಪಿ ಸಾಲದ ಹಣ ವಾಪಸ್ ನೀಡುವಂತೆ ಕುಮಾರ್‌ಗೆ ಒತ್ತಾಯಿಸುತ್ತಿದ್ದ. ಇತ್ತ ಕುಮಾರ್, ನಿರ್ಲಕ್ಷ್ಯದಿಂದ ಸದ್ಯ ಕೊಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದ ಎನ್ನಲಾಗಿದೆ.
ಇಬ್ಬರಲ್ಲಿ ಒಬ್ಬರು ಸಾಯಬೇಕು!
ಆರೋಪಿ ದಯಾಳ್‌ಗೆ ಸಾಲ ಕೊಟ್ಟವರು ಹಣ ವಾಪಸ್‌ಗೆ ಪೀಡಿಸುತ್ತಿದ್ದರು. ಅದರಿಂದ ಕೋಪಗೊಂಡಿದ್ದ ಆರೋಪಿ, ಕುಮಾರ್‌ಗೆ ಸಾಲಗಾರರ ಒತ್ತಡ ಹೆಚ್ಚಾಗಿದ್ದು, ಹಣ ವಾಪಸ್ ಕೊಡಲಿಲ್ಲವೆಂದರೆ, ಇಬ್ಬರಲ್ಲಿ ಒಬ್ಬರು ಸಾಯಬೇಕು, ಇಲ್ಲವೇ ಇಬ್ಬರು ಸಾಯಬೇಕಾದ ಪರಿಸ್ಥಿತಿ ಇದೆ ಎಂದು ವಿವರಿಸಿದ್ದ. ಆಗಲೂ ಕುಮಾರ್, ನಿರ್ಲಕ್ಷ್ಯ ತೋರಿದ್ದ. ಅದರಿಂದ ಇನ್ನಷ್ಟು ಆಕ್ರೋಶಗೊಂಡ ಆರೋಪಿ, ಕುಮಾರ್ ಹತ್ಯೆಗೈಯಲು ನಿರ್ಧರಿಸಿ, ಸೋಮವಾರ ಮಧ್ಯಾಹ್ನವೇ ಚಾಕು ಖರೀದಿಸಿದ್ದಾನೆ. ರಾತ್ರಿ ೮ ಗಂಟೆ ಸುಮಾರಿಗೆ ಮನೆಯಲ್ಲಿದ್ದ ಕುಮಾರ್‌ನನ್ನು ಜತೆಗೆ ಕರೆದೊಯ್ದು ರಾಜಾಜಿನಗರದ ರಾಮಮಂದಿರದ ಸಮೀಪದ ಬಾರ್‌ನಲ್ಲಿ ತಡರಾತ್ರಿವರೆಗೂ ಮದ್ಯ ಸೇವಿಸಿದ್ದಾರೆ. ಬಳಿಕ ಮುಂಜಾನೆ ೨.೩೦ರ ಸುಮಾರಿಗೆ ಓಕಳೀಪುರದ ನ್ಯೂಕಾಳಪ್ಪ ಬ್ಲಾಕ್‌ನಲ್ಲಿ ಬರುವಾಗ, ಆರೋಪಿ ಮತ್ತು ಕುಮಾರ್ ನಡುವೆ ಸಾಲದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ.
ಹತ್ತಾರು ಬಾರಿ ಇರಿದು ಕೊಲೆ:
ಜಗಳ ವಿಕೋಪ್ಕಕೆ ಹೋದಾಗ, ತನ್ನ ಬಳಿಯಿದ್ದ ಚಾಕುವಿನಿಂದ ಕುಮಾರ್‌ನ ಕುತ್ತಿಗೆ, ಬೆನ್ನು ಹೊಟ್ಟೆ ಸೇರಿ ದೇಹದ ಆರೇಳು ಕಡೆ ಹತ್ತಾರು ಬಾರಿ ಇರಿದು ಕೊಲೆಗೈದು ಪರಾರಿಯಾಗಿದ್ದ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಹೋಗಿ, ಮೃತದೇಹ ಗುರುತಿಸಿ, ಕ್ಷೀಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ ನಾಲ್ಕೈದು ಗಂಟೆಯಲ್ಲೇ ಆರೋಪಿಯನ್ನು ಬಂಧಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶ್ರೀರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net