ಪಟಾಕಿಯಲ್ಲಿ ಹುಡುಗಾಟವಾಡಲು ಹೋಗಿ ಜೀವ ಕಳೆದುಕೊಂಡ: ಪಟಾಕಿಯ ಸ್ಫೋಟಕ್ಕೆ ಗಂಭೀರವಾಗಿ ಗಾಯಗೊಂಡು ಸತ್ತೆ ಹೋದ

pataki
Published on

ಬೆಂಗಳೂರು: ಸ್ನೇಹಿತರ ಸವಾಲು ಸ್ವೀಕರಿಸಿ ಪಟಾಕಿಯಲ್ಲಿ ಹುಡುಗಾಟವಾಡಲು ಹೋದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಮಂದಿ ಆರೋಪಿಗಳನ್ನು ಕೋಣನಕುಂಟೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೊಟ್ಟಿಗೆರೆ ಸಮೀಪದ ವೀವರ್ಸ್ ಕಾಲೋನಿ ನಿವಾಸಿ ಶಬರಿ(೩೨) ಮೃತ ದುರ್ದೈವಿ.

ಮೃತನ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿಕೊಂಡು ವೀವರ್ಸ್ ಕಾಲೋನಿ ನಿವಾಸಿಗಳಾದ ನವೀನ್ ಕುಮಾರ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್ ಹಾಗೂ ಸಂತೋಷ್ ಕುಮಾರ್ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಬರಿ ಮತ್ತು ಬಂಧಿತ ಆರೋಪಿಗಳು ಸ್ನೇಹಿತರಾಗಿದ್ದು, ವೀವರ್ಸ್ ಕಾಲೋನಿಯ ನಿವಾಸಿಗಳಾಗಿದ್ದಾರೆ. ಗಾರೆ ಕೆಲಸ ಸೇರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ನ.೧ ರ ರಾತ್ರಿ ೯ ಗಂಟೆಗೆ ಪಾನಮತ್ತ ಶಬರಿ ವೀವರ್ಸ್ ಕಾಲೋನಿಯ ೩ನೇ ಅಡ್ಡರಸ್ತೆಯ ಅಂಥೋನಿ ಎಂಬುವವರ ಅಂಗಡಿ ಬಳಿ ಹೋಗಿದ್ದಾನೆ. ಈ ವೇಳೆ ಆರೋಪಿಗಳು ದೀಪಾವಳಿ ಪ್ರಯುಕ್ತ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಸ್ನೇಹಿತರು ಪಟಾಕಿ ಸಿಡಿಸುತ್ತಿರುವ ಸ್ಥಳಕ್ಕೆ ಶಬರಿ ತೆರಳಿದ್ದಾನೆ. ಈ ವೇಳೆ ಆರೋಪಿಗಳು ನಾವು ಡಬ್ಬದ ಕೆಳಗೆ ಪಟಾಕಿ ಹಚ್ಚುತ್ತೇವೆ. ನೀನು ಈ ಡಬ್ಬದ ಮೇಲೆ ಕುಳಿತರೇ ನಿನಗೆ ಆಟೋ ಕೊಡಿಸುತ್ತೇವೆ ಎಂದು ಶಬರಿಗೆ ಆಮಿಷವೊಡ್ಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಶಬರಿ ಇದಕ್ಕೆ ಒಪ್ಪಿಕೊಂಡಿದ್ದಾನೆ. ಬಳಿಕ ಆರೋಪಿಗಳು ಭಾರೀ ಸ್ಪೋಟದ ಪಟಾಕಿಗಳನ್ನು ಡಬ್ಬದ ಒಳಗೆ ಇಟ್ಟು ಅದರ ಮೇಲೆ ಶಬರಿಯನ್ನು ಕೂರಿಸಿದ್ದಾರೆ.

ಅಂಗಾಗಳಿಗೆ ಗಂಭೀರ ಗಾಯವಾಗಿತ್ತು:

ಬಳಿಕ ಆರೋಪಿಗಳು ಪಟಾಕಿಯ ಬತ್ತಿಗೆ ಬೆಂಕಿ ಹಚ್ಚಿ ದೂರಕ್ಕೆ ಓಡಿದ್ದಾರೆ. ಧೈರ್ಯದಿಂದ ಶಬರಿ ಡಬ್ಬದ ಮೇಲೆ ಕುಳಿತಿರುವಾಗ ಡಬ್ಬದ ಒಳಗೆ ಪಟಾಕಿಗಳು ಸಿಡಿದಿವೆ. ಪಟಾಕಿಗಳ ಸ್ಫೋಟಕ್ಕೆ ಶಬರಿಯ ತೊಡೆ, ಖಾಸಗಿ ಅಂಗಾಂಗಳಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಾಳು ಶಬರಿಯನ್ನು ಸ್ಥಳೀಯರು ಆಂಬ್ಯುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ಪಟಾಕಿ ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಶಬರಿ ಚಿಕಿತ್ಸೆ ಫಲಿಸದೆ ನ.೨ ರ ಸಂಜೆ ೫.೩೦ಕ್ಕೆ ಮೃತಪಟ್ಟಿದ್ದಾನೆ. ಪಟಾಕಿ ಸ್ಫೋಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಮೃತ ಶಬರಿ ತಾಯಿ ವಿಜಯಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net