

ನವದೆಹಲಿ: ಪೊಲೀಸರೆಂದರೆ ಭಯ ಮತ್ತು ಗೌರವ ಎರಡೂ ಇರುತ್ತದೆ. ಏಕೆಂದರೆ, ನಾಗರಿಕರನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಾರೆ. ಅಲ್ಲದೆ ಕೆಟ್ಟವರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಾರೆ. ಪ್ರಾಮಾಣಿಕ ಪೊಲೀಸರ ಬಗ್ಗೆ ಮಾತ್ರ ಜನರಿಗೆ ಯಾವಾಗಲೂ ಗೌರವವಿದೆ. ಏಕೆಂದರೆ, ಭ್ರಷ್ಟ ಅಧಿಕಾರಿಗಳು ಕೂಡ ನಮ್ಮ ನಡುವೆ ಇದ್ದಾರೆ. ಸಿಗುವ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡದೆ ಹಣಕ್ಕಾಗಿ ನೀಚ ಕೆಲಸ ಮಾಡಿ ಜೈಲಿಗೆ ಹೋಗಿರುವಂತಹ ಪೊಲೀಸರು ಸಹ ಇದ್ದಾರೆ.
ಒಂದಷ್ಟು ಪೊಲೀಸರು ಇರುತ್ತಾರೆ. ಅವರು ಇಡೀ ಪೊಲೀಸ್ ವ್ಯವಸ್ಥೆಗೆ ಕಳಂಕ ತರುವ ರೀತಿಯಲ್ಲಿ ವರ್ತಿಸುತ್ತಾರೆ. ಭ್ರಷ್ಟಾಚಾರ ಮಾಡುತ್ತಾರೆ, ಅಕ್ರಮ ಎಸಗುತ್ತಾರೆ, ಲಂಚ ಪಡೆದು ದೌರ್ಜನ್ಯ ಮಾಡುತ್ತಾರೆ. ಇತ್ತೀಚೆಗಷ್ಟೇ ಕಾನ್ಸ್ಟೆಬಲ್ ಒಬ್ಬರು ಪೊಲೀಸ್ ಠಾಣೆಯನ್ನು ಮಸಾಜ್ ಸೆಂಟರ್ ಆಗಿ ಪರಿವರ್ತಿಸಿದ್ದರು. ಅಲ್ಲದೆ, ಚಿಕ್ಕ ಮಕ್ಕಳಿಂದಲೇ ಮಸಾಜ್ ಮಾಡಿಸಿಕೊಂಡಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನು ಪ್ರತಾಪ್ ಸಿಂಗ್ ಹೆಸರಿನ ಹೆಡ್ ಕಾನ್‌ಸ್ಟೆಬಲ್, ಮೂವರು ಮಕ್ಕಳನ್ನು ನೇಮಿಸಿಕೊಂಡು, ಅವರಿಂದ ಪ್ರತಿದಿನ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಒಂದು ಮಗು ತಲೆಗೆ ಮಸಾಜ್ ಮಾಡುತ್ತಿದ್ದರೆ, ಇನ್ನೆರಡು ಮಕ್ಕಳು ಪಕ್ಕದಲ್ಲೇ ನಿಂತು ಕೈ ಒತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇತ್ತೀಚೆಗಷ್ಟೇ ವಿಡಿಯೋ ಹೊರಬಿದ್ದಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳನ್ನು ಇಂತಹ ಕೆಲಸಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಡ್ ಕಾನ್ಸ್‌ಟೆಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಉನ್ನತಾಧಿಕಾರಿಗಳು ಏರಿಯಾ ಅಧಿಕಾರಿಗೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)