

ಬೆಂಗಳೂರು: ಯುಗಾದಿ ಹಬ್ಬದ ಹೊಸತೊಡಕಿಗೆ ಮಟನ್ ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ರಸ್ತೆ ಬ್ಯಾಟರಾಯನಪುರ ನಿವಾಸಿ ಪುಟ್ಟಸ್ವಾಮಿ ಗೌಡ ಬಂಧಿತ. ಹೊಸ ತೊಡಕಿಗೆ ಮಟನ್ ಚೀಟಿ ಹೆಸರಲ್ಲಿ ಪುಟ್ಟಸ್ವಾಮಿ ಗೌಡ, ಸಾವಿರಾರು ಜನರಿಂದ ತಿಂಗಳಿಗೆ 400 ರೂ. ರಂತೆ ವರ್ಷಕ್ಕೆ 4800 ರೂ. ಸಂಗ್ರಹಿಸಿದ್ದ. ಹೊಸತೊಡಕಿಗೆ ಮಾಂಸ ಮತ್ತು ಪಾತ್ರೆ ಕೊಡುವುದಾಗಿ ಭರವಸೆ ಕೊಟ್ಟಿದ್ದ. ಇದೆ ರೀತಿ ಹಲವು ವರ್ಷಗಳಿಂದ ಚೀಟಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದ. ಕಳೆದ ಹಬ್ಬ ಸಮೀಪಿಸುತ್ತಿದಂತೆ ಏಕಾಏಕಿ ಫೋನ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಪುಟ್ಟಸ್ವಾಮಿ ಗೌಡ ಸಂಪರ್ಕಕ್ಕೆ ಸಿಗದೆ ಇದ್ದಾಗ ಚೀಟಿದಾರರು, ಬ್ಯಾಟರಾಯನಪುರ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಜನರಿಂದ ಸಂಗ್ರಹಿಸಿದ್ದ ಹಣವನ್ನು ತನ್ನ ಸಾಲ ತೀರಿಸಿಕೊಳ್ಳಲು ಬಳಸಿಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಸ್ತುತ ಆರೋಪಿಯ ಬ್ಯಾಂಕ್ ಖಾತೆಯಲ್ಲಿ ಒಂದು ಸಾವಿರ ರೂ. ಸಹ ಇಲ್ಲವಾಗಿದೆ. ಚೀಟಿ ಹಣವನ್ನು ತೀರಿಸಲು ಮತ್ತೆ ಸಾಲ ಮಾಡಿಕೊಂಡಿದ್ದ. ಅದನ್ನು ವಾಪಸ್ ಕೊಡಲು ಸಾಧ್ಯವಾಗದೆ ಇದ್ದಾಗ ಪುಟ್ಟಸ್ವಾಮಿ ಗೌಡ ತಲೆಮರೆಸಿಕೊಂಡಿದ್ದ. ಸದ್ಯ 80 ಲಕ್ಷ ರೂ. ಸಾಲ ಮಾಡಿಕೊಂಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.