Bihar Election | ಇಂಡಿಯಾ ಬಣಕ್ಕೆ ಮುಸ್ಲಿಮರ ಬಗ್ಗೆ ಕಾಳಜಿ ಇಲ್ಲ ಎಂದಿದ್ದ ಚಿರಾಗ್;​ ಅಧಿಕಾರದ ದುರಾಸೆಗಾಗಿ ಈ ರೀತಿ ಮಾತನಾಡುತ್ತಾರೆ ಎಂದ ತೇಜಸ್ವಿ ಯಾದವ್​

tejashwi
Published on

Bihar Election: ಮಹಾಘಟಬಂಧನ್ ಮುಸ್ಲಿಮರನ್ನು ವೋಟ್​​ ಬ್ಯಾಂಕ್​ಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ, ಆ ಸಮುದಾಯದವರನ್ನು ಸಿಎಂ, ಡಿಸಿಎಂ ಮಾಡಲು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಮನಸ್ಸಿಲ್ಲ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಚಿರಾಗ್​ ಪಾಸ್ವಾನ್​ ಹೇಳಿಕೆಗೆ ತಿರುಗೇಟು ನೀಡಿರುವ ಆರ್​ಜೆಡಿ ನಾಯಕ ತೇಜಸ್ವಿ ಯಾದವ್,​ ಅಧಿಕಾರದ ದುರಾಸೆಯಿಂದ ಚಿರಾಗ್​ ಏನೇನೊ ಮಾತನಾಡುತ್ತಾರೆ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಇಂಡಿಯಾ ಬಣದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್​, ಅವರು ಏನು ಹೇಳಿಕೆ ನೀಡುತ್ತಾರೆ, ಏನು ಹೇಳುವುದಿಲ್ಲ ಎಂಬುದು ಇಲ್ಲಿ ಮುಖ್ಯ ವಿಷಯವಲ್ಲ, ಮುಸ್ಲಿಂ ಸಮುದಾಯದ ಜನರಿಗೆ ಅಧಿಕಾರ ನೀಡುವ ವಿಷಯವಾಗಿ ಅವರ ದೃಷ್ಟಿಕೋನವೇನು? ಎಂದು ಪ್ರಶ್ನಿಸುತ್ತಾ, ಎನ್‌ಡಿಎ ಮೈತ್ರಿಕೂಟದಲ್ಲಿ ಚಿರಾಗ್​ಗೆ ಯಾವುದೇ ರೀತಿಯ ಸೌಕರ್ಯಗಳಿಲ್ಲ ಎಂದರು.

ಚಿರಾಗ್​ ತಂದೆ, ಬಿಹಾರದ ಹಿರಿಯ ನಾಯಕ ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಪಾಸ್ವಾನ್ ಮತ್ತು ಅವರ ಚಿಕ್ಕಪ್ಪ, ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ (ಆರ್‌ಎಲ್‌ಜೆಪಿ) ಮುಖ್ಯಸ್ಥ ಪಶುಪತಿ ಕುಮಾರ್ ಪರಾಸ್ ನಡುವಿನ ಕಲಹವನ್ನು ಉಲ್ಲೇಖಿಸಿ ಮಾತನಾಡಿದ ತೇಜಸ್ವಿ, ಎನ್‌ಡಿಎದ ಕೆಲ ನಾಯಕರು ಚಿರಾಗ್ ಕುಟುಂಬದಲ್ಲಿನ ಸಂಬಂಧಕ್ಕೆ ಬೆಂಕಿ ಹಚ್ಚಿದರು ಎಂದು ಗಂಭೀರ ಆರೋಪ ಮಾಡಿದರು. ಅಧಿಕಾರದ ದುರಾಸೆಯ ಕಾರಣದಿಂದ ಚಿರಾಗ್ ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈ ಜೋಡಿಸಿದ್ದು, ಸ್ಥಾನಮಾನದ ಆಸೆಗಾಗಿ ಚಿರಾಗ್ ರಾಜಿ ಮಾಡಿಕೊಳ್ಳಲು ಹಿಂದೇಟು ಹಾಕುವುದಿಲ್ಲ, ಆದ್ದರಿಂದ ಅವರ ಹೇಳಿಕೆಗಳಿಗೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದರು.

ಬಿಹಾರ ಚುನಾವಣೆಗಾಗಿ ಇಂಡಿಯಾ ಬಣದ ನಾಯಕರು ಮುಸ್ಲಿಂ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಅಭ್ಯರ್ಥಿನ್ನಾಗಿಸಿಲ್ಲ ಎಂದು ಚಿರಾಗ್​ ಪಾಸ್ವಾನ್ ಆರ್‌ಜೆಡಿಯನ್ನು ಗುರಿಯಾಗಿಸಿಕೊಂಡು ಟೀಕಿಸಿದ ಬಳಿಕ ಯಾದವ್​ರ ಈ ಹೇಳಿಕೆಗಳು ಹೊರಬಿದ್ದಿವೆ.

ಚಿರಾಗ್​ ಪಾಸ್ವಾನ್​ ಹೇಳಿದ್ದೇನು..?

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕೇಂದ್ರ ಸಚಿವ ಚಿರಾಗ್​ ಪಾಸ್ವಾನ್, 2005 ರಲ್ಲಿ ನನ್ನ ತಂದೆ, ದಿವಂಗತ ರಾಮ್ ವಿಲಾಸ್ ಪಾಸ್ವಾನ್, ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿಯಾಗಲು ತಮ್ಮದೇ ಪಕ್ಷವನ್ನು ತ್ಯಾಗ ಮಾಡಿದರು. ಆದರೆ, ಆರ್​ಜೆಡಿ ಅವರನ್ನು ಬೆಂಬಲಿಸಲಿಲ್ಲ. ಈ ಘಟನೆ ನಡೆದು ಇಪ್ಪತ್ತು ವರ್ಷಗಳು ಕಳೆದರೂ, ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯನ್ನಾಗಲಿ ಮಾಡಲು ಸಿದ್ಧರಿಲ್ಲ ಎಂದಿದ್ದಾರೆ. ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಮಹಾಘಟಬಂಧನ್ ನಾಯಕರುಗಳು ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದು, ಸಮುದಾಯದ ಜನರು ಈ ತಂತ್ರವನ್ನು ಅರ್ಥಮಾಡಿಕೊಳ್ಳಬೇಕು, ಕೇಂದ್ರ ಸರ್ಕಾರದ ಯೋಜನೆಗಳು ಎಲ್ಲ ವರ್ಗದ ಜನರಿಗೂ ಪ್ರಯೋಜನ ನೀಡುವ ಗುರಿಯನ್ನು ಹೊಂದಿವೆ ಎಂದು ಹೇಳಿದರು..

ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್​ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್​ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net