ಎಚ್‌ಡಿಕೆ ವಿರುದ್ಧ ಎಫ್ ಐಆರ್

hdk
Published on

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ 50 ಕೋಟಿ ರೂ. ನೀಡುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ರಿಯಲ್‌ಎಸ್ಟೇಟ್ ಉದ್ಯಮಿ ಅಮೃತಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಕುಮಾರಸ್ವಾಮಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ವಿರುದ್ಧ ಗುರುವಾರ ಎಫ್ ಐಆರ್ ದಾಖಲಾಗಿದೆ.

ದಾಸರಹಳ್ಳಿಯ ವಿಜಯ್ ಟಾಟಾ ನೀಡಿರುವ ದೂರಿನ ಅನ್ವಯ ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿ) ದಾಖಲಾಗಿತ್ತು. ಕಾನೂನು ತಜ್ಞರ ಸಲಹೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್, ವಿಜಯ್ ಟಾಟಾ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾಗಿ ಕುಮಾರಸ್ವಾಮಿ ಇತ್ತೀಚೆಗೆ ಆರೋಪ ಮಾಡಿದ್ದರು. ಇದರ ಬೆನ್ನಲ್ಲೆ ವಿಜಯ್ ಟಾಟಾ ಈ ದೂರು ಸಲ್ಲಿಸಿದ್ದಾರೆ.

2018ರಿಂದ ಜೆಡಿಎಸ್‌ನಲ್ಲಿ ಇದ್ದೇನೆ. ಪ್ರಸುತ್ತ ಜಾಲತಾಣ ವಿಭಾಗದ ಉಪಾಧ್ಯಕ್ಷ ಆಗಿದ್ದೇನೆ. ಎಚ್.ಡಿ. ದೇವೇಗೌಡರೇ ಮನೆಗೆ ಕರೆದು ಪಕ್ಷದ ಹೊಣೆಗಾರಿಕೆಯನ್ನು ಕುಮಾರಸ್ವಾಮಿ ಸಮ್ಮುಖದಲ್ಲಿ ನೀಡಿದ್ದರು ಎಂದು ವಿಜಯ್ ಟಾಟಾ ದೂರಿನಲ್ಲಿ ಹೇಳಿದ್ದಾರೆ.

ಆ.24ರಂದು ರಾತ್ರಿ 10 ಗಂಟೆಗೆ ನನ್ನ ಮನೆಗೆ ಬಂದಿದ್ದ ರಮೇಶ್ ಗೌಡ, ಮುಂಬರುವ ಚನ್ನಪಟ್ಟಣ ಉಪ ಚುನಾವಣೆ ಕುರಿತು ಪ್ರಸ್ತಾಪಿಸಿದ್ದರು. ನಿಖಿಲ್‌ಗೆ ಟಿಕೆಟ್ ನೀಡುವುದು ಅಂತಿಮವಾಗಿದೆ ಎಂದು ತಿಳಿಸಿದ್ದರು. ಆಗ ಕುಮಾರಸ್ವಾಮಿ ಅವರಿಗೆ ಕರೆ ಮಾಡಿದ ರಮೇಶ್‌ಗೌಡ, ತಾನು ವಿಜಯ್ ಟಾಟಾ ಮನೆಗೆ ಬಂದಿರುವುದಾಗಿ ಹೇಳಿ ನನಗೆ ಮಾತನಾಡುವಂತೆ ಮೊಬೈಲ್ ನೀಡಿದರು. ಕುಮಾರಸ್ವಾಮಿ ಅವರು ಚನ್ನಪಟ್ಟಣ ಉಪ ಚುನಾವಣೆ ವಿಷಯ ಪ್ರಸ್ತಾಪಿಸಿ 50 ಕೋಟಿ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟರು.

ನಾನು ಅಷ್ಟು ಹಣ ಎಲ್ಲಿದೆ ಎಂದು ಕೇಳಿದೆ. ಕೋಪಗೊಂಡ ಕುಮಾರಸ್ವಾಮಿ, ನಾನು ಹೇಳಿದಂತೆ ನೀವು 50 ಕೋಟಿ ರೂ. ರೆಡಿ ಮಾಡಿ. ಇಲ್ಲ ನಾನೇನು ಮಾಡಿತ್ತೇನೋ ನನಗೆ ಗೊತ್ತಿಲ್ಲ ಎಂದು ಬೆದರಿಸಿ ಕರೆ ಸ್ಥಗಿತಗೊಳಿಸಿದರು. ನಾನು ದೇವಾಲಯ ಮತ್ತು ಶಾಲೆ ಕಟ್ಟಿಸುತ್ತಿದ್ದು, 5 ಕೋಟಿ ರೂ. ಕೊಡುವಂತೆ ರಮೇಶ್ ಗೌಡ ತಾಕೀತು ಮಾಡಿದರು ಎಂದು ವಿಜಯ್ ಟಾಟಾ ದೂರಿನಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net