

ಬೆಂಗಳೂರು:
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹಿರಿಯ ಪತ್ರಕರ್ತ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಿ. ರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ಪ್ರಾಮಾಣಿಕ, ಮೌಲ್ಯಾಧಾರಿತ ಮಾಧ್ಯಮದ ಶ್ರೇಷ್ಠ ಕೊಂಡಿಯಾಗಿರುವ ಹಿಂದೂ ರಾಮಯ್ಯನವರು ನಮ್ಮ ತಂದೆಯವರ ವಯಸ್ಸಿನವರು ಮತ್ತು ಅವರ ಸಮಕಾಲೀನರು. ಅವರ ಅನಾರೋಗ್ಯದ ಬಗ್ಗೆ ಮಾಹಿತಿ ಬಂತು. ಅವರ ಕ್ಷೇಮ ವಿಚಾರಿಸಲು ಬಂದೆ. ಅವರು ಆರೋಗ್ಯವಾಗಿರಲಿ, ಶತಾಯುಷಿಯಾಗಿ ಸದಾ ಮಾರ್ಗದಶನ ನೀಡಲಿ ಎಂದು ಹಾರೈಸಿದೆ ಎಂದು ಹೇಳಿದ್ದಾರೆ.
ಹಿರಿಯರು ಆಗಿರುವ ರಾಮಯ್ಯ ಅವರು ಪತ್ರಿಕೋದ್ಯಮದ ಮಹಾವೃಕ್ಷ. ಅವರು ನನ್ನ ಗುರು ಸಮಾನರು. ವಿಧಾನ ಪರಿಷತ್ ಮಾಜಿ ಸದಸ್ಯರಾಗಿಯೂ ಅವರು ನಾಡಿಗೆ ಬಹುದೊಡ್ಡ ಸೇವೆ ಮಾಡಿದ್ದಾರೆ. ಅಲ್ಲದೆ, ಮೊದಲಿನಿಂದಲೂ ನನ್ನ ಬಗ್ಗೆ ಅವರು ಬಹಳಷ್ಟು ಪ್ರೀತಿ, ವಾತ್ಸಲ್ಯ ಹೊಂದಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.