

ಬೆಂಗಳೂರು: ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರು ನಗರವನ್ನು ಗ್ರೇಟರ್ ಬೆಂಗಳೂರು ಮಾಡುವ ಯೋಜನೆ ಪ್ರಸ್ತಾಪದ ಜೊತೆಗೆ ಪ್ರಾಧಿಕಾರ ರಚಿಸುತ್ತಿದ್ದಂತೆ ವಿಪಕ್ಷಗಳಲ್ಲಿ ಭಾರೀ ವಿರೋಧಗಳು ವ್ಯಕ್ತವಾಗಿವೆ. ಪ್ರಸ್ತುತ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಜಲಾವೃತ್ತಗೊಂಡಿವೆ. ವಾಹನ ಸವಾರು ಪರದಾಡುತ್ತಿದ್ದಾರೆ. ಈ ವಿಷಯವನ್ನು ಮುಂದಿಟ್ಟು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HDK), ಗ್ರೇಟರ್ ಬೆಂಗಳೂರು ಯೋಜನೆ ವಿರುದ್ಧ ಕಿಡಿಕಾರಿದ್ದಾರೆ.
"ಗ್ರೇಟರ್ ಬೆಂಗಳೂರು!? ಹೆಚ್ಚು ಮಳೆಯಾದರೆ ಮುಳುಗುತ್ತದೆ. ಕಡಿಮೆ ಸುರಿದರೆ ತೇಲುತ್ತದೆ. ರಸ್ತೆಗಳಲ್ಲಿಯೇ ಕೆರೆ, ಚರಂಡಿ! ಗುಂಡಿಗೆ ಹಿಡಿ ಮಣ್ಣಾಕುವುದಕ್ಕೂ ಬಿಡಿಗಾಸಿಲ್ಲ. ಸುರಂಗಕ್ಕೆ ಮಾತ್ರ ಸಾವಿರಾರು ಕೋಟಿ ಟೆಂಡರು. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು. ವಾರಕ್ಕೊಮ್ಮೆ ತೆರಿಗೆ ಬರೆ, ದರ ಏರಿಕೆ. ಜನರೆಂದರೆ ಜೀವರಹಿತ ಕಲ್ಲುಬಂಡೆಗಳೇ? ಮನಸೋಇಚ್ಛೆ ಒಡೆದು ಬಡಿದು ನುಂಗಲು" ಎಂದು ಪ್ರಶ್ನಿಸಿದ್ದಾರೆ.
"ನಾಡು ಎಂದರೆ ಕಲ್ಲು ಬಂಡೆಗಳಲ್ಲ, ನಾಡು ಎಂದರೆ ಮನುಷ್ಯರು. ಕೆರೆಯ ನೀರನು ಕೆರೆಗೆ ಚೆಲ್ಲುತ್ತಿಲ್ಲವೇಕೆ? ಕೆರೆ ನೀರಿಗೆ ಕಮೀಷನ್ ಕೋಡಿ ಬಿದ್ದಿದೆ. ತೆರಿಗೆ ಥೈಲಿ, ಬೆಲೆ ಸುಲಿಗೆ ಹಣವೆಲ್ಲಿ ಜಾಹೀರಾತುಗಳಲ್ಲಿ ಬಣ್ಣಬಣ್ಣವಾಗಿ ಕಾಣುವ ಬೆಂಗಳೂರು, ನೈಜವಾಗಿ ನಿಟ್ಟುಸಿರು ಬಿಡುತ್ತಿದೆ. ಏಕೆ? ಬರುತ್ತಿರುವ ಆದಾಯ ಎಲ್ಲಿ ಹೋಗುತ್ತಿದೆ? ನಗರ ಜನರ ಬೆವರಿನ ಹಣ ಏನೇನಾಗುತ್ತಿದೆ? ಕಲೆಕ್ಷನ್ ಎಷ್ಟು, ವೆಚ್ಚ ಎಷ್ಟು, ಸ್ವಾಹಾ ಎಷ್ಟು?" ಎಂದು ಲೇವಡಿ ಮಾಡಿದ್ದಾರೆ.
"ಗುಂಡಿ ಮುಚ್ಚಲು ಗತಿ ಇಲ್ಲ. ಚರಂಡಿ ಕಸ ಎತ್ತಲು ದಿಕ್ಕಿಲ್ಲ. ನಿತ್ಯವೂ ಗುದ್ದಲಿಪೂಜೆ, ಶಂಕುಸ್ಥಾಪನೆ. ಹೊಸ ಶೀಶೆ, ಹಳೇ ಮದ್ಯ. ಹಳೇ ಕಾಮಗಾರಿ, ಹೊಸ ಹೊಸ ಬಿಲ್ಲು. ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್'ಗಳ ಬೆಂಗಳೂರು" ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.