ದೇವರೇ ಆ ಡೈರಿಯನ್ನು ಮುರಿದು ಹಾಕಿದ್ದಾನೆ! 'ಕಿಂಗ್' ಕೊಹ್ಲಿ ಕುರಿತು ಆಕಾಶ್​ ಚೋಪ್ರಾ ಮನದಾಳ | Virat Kohli

ವಿಜಯವಾಣಿ - 2025-05-18T130112.097
Published on

Virat Kohli: ನಿನ್ನೆ (ಮೇ.17) ಕ್ರಿಕೆಟ್​ ದಂತಕಥೆ, ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್​, ‘ದಾಖಲೆಗಳ ಸರದಾರ’, ‘ರನ್​ಮಷಿನ್’, ‘ಕಿಂಗ್​’ ಕೊಹ್ಲಿಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್​ ನಿವೃತ್ತಿ ಗೌರವ ಸೂಚಿಸಲು ಬಹಳ ಆಸೆಯಿಂದ ಬಂದಿದ್ದ ಅಭಿಮಾನಿಗಳಿಗೆ ನಿರಂತರ ಮಳೆ ಭಾರೀ ನಿರಾಶೆ ಉಂಟುಮಾಡಿತು. ಇದು ಅಸಂಖ್ಯಾತ ವಿರಾಟ್ ಫ್ಯಾನ್ಸ್​ಗೆ ಎಲ್ಲಿಲ್ಲದ ನೋವನ್ನು ತಂದೊಡ್ಡಿತು.

ವಿರಾಟ್ ಕೊಹ್ಲಿ ಅವರ ನಂ.18 ಟೆಸ್ಟ್ ಜೆರ್ಸಿ ಧರಿಸಿ, ಆರ್​ಸಿಬಿ ಮತ್ತು ಕೆಕೆಆರ್ ಪಂದ್ಯ ನೋಡಲು ಆಗಮಿಸಿದ್ದ ಕ್ರಿಕೆಟ್​ ಪ್ರಿಯರಿಗೆ ತೀವ್ರ ಬೇಸರ ಎದುರಾಯಿತು. ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಗೌರವ ಸೂಚಿಸಲು ಇದೇ ಸೂಕ್ತ ಸಮಯ ಎಂದು ತುದಿಗಾಲಿನಲ್ಲಿ ನಿಂತಿದ್ದ ವಿರಾಟ್ ಅಭಿಮಾನಿ ಬಳಗ ಸಪ್ಪೆ ಮುಖದಲ್ಲೇ ತಮ್ಮ ತಮ್ಮ ಮನೆಗೆ ಹಿಂತಿರುಗಿದರು. ಮತ್ತೊಂದೆಡೆ, ವಿರಾಟ್ ನಿವೃತ್ತಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್​ಗೆ ಅಪಾರ ನಷ್ಟವನ್ನು ಉಂಟುಮಾಡಿದೆ ಎಂದು ಮಾಜಿ ಹಿರಿಯ ಕ್ರಿಕೆಟಿಗ ಆಕಾಶ ಚೋಪ್ರಾ ಅಭಿಪ್ರಾಯಿಸಿದ್ದಾರೆ.

"ವಿರಾಟ್​ ಕೊಹ್ಲಿಯಂತ ಅದ್ಭುತ ಆಟಗಾರರನ್ನು ನಿರ್ಮಿಸುವ ಒಂದು ವ್ಯವಸ್ಥೆ ಇಲ್ಲಿಗೆ ಮುಗಿದಿದೆ. ಕ್ರಿಕೆಟ್​ ಇತಿಹಾಸದಲ್ಲಿ ಅವರಂತಹ ಒಬ್ಬ ಆಟಗಾರ ಮತ್ತೊಬ್ಬ ಸಿಗಲು ಸಾಧ್ಯವಿಲ್ಲ. ಈ ಒಂದು ಯುಗಕ್ಕೆ ದೇವರೇ ಪೂರ್ಣವಿರಾಮ ಹಾಕಿಬಿಟ್ಟಿದ್ದಾನೆ. ಭಗವಂತ ಕೊಹ್ಲಿ ಆಳಿದ ಯುಗ ಮುಗಿದುಹೋದ ನಂತರ ಆ ಡೈರಿಯನ್ನು ಇದೀಗ ಮುರಿದಿದ್ದಾನೆ. ಎಲ್ಲಾ ಫಾರ್ಮೆಟ್​ಗಳಲ್ಲಿ ತನ್ನ ಅಬ್ಬರದ ಬ್ಯಾಟಿಂಗ್ ನಡೆಸುವ ಏಕೈಕ ಆಟಗಾರ ವಿರಾಟ್​ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದರ ಬಗ್ಗೆ ಎರಡನೇ ಮಾತಿಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಟೆಸ್ಟ್​ ಕ್ರಿಕೆಟ್​ ನೋಡುವ ಮನಸ್ಥಿತಿ ಬಹುತೇಕರಿಗಿಲ್ಲ. ಐದು ದಿನಗಳ ಕಾಲ ಟೆಸ್ಟ್​ನಲ್ಲಿ ನಿಮ್ಮ ಏಕಾಗ್ರತೆ, ಮನಸ್ಸು ಬದ್ಧತೆಯಿಂದ ಕೂಡಿರಬೇಕು. ಆಗ ಮಾತ್ರ ಇಲ್ಲಿ ಯಶಸ್ಸು ಸಾಧಿಸಲು ಸಾಧ್ಯ" ಎಂದು ಚೋಪ್ರಾ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net