ಮೈತ್ರಿಗೆ ಎಚ್​ಡಿಕೆ ನಡೆಯೇ ಮುಳುವು?: ಜಾತ್ಯತೀತತೆ ಯಕ್ಷಪ್ರಶ್ನೆ, ಪಕ್ಷದೊಳಗೆ ಅಸಮಾಧಾನ, ಇಕ್ಕಟ್ಟಿನಲ್ಲಿ ದಳಪತಿಗಳು..

HDK
Published on
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರನ್ನು ನಿರ್ಲಕ್ಷಿಸಿ ರಾಷ್ಟ್ರ ಮಟ್ಟದ ರಾಜಕಾರಣ ಮಾಡಲು ಮುಂದಾದದ್ದೇ ಜೆಡಿಎಸ್​ಗೆ ಮುಳುವಾಯಿತೆ? ಈ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ! ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಇಟ್ಟ ಹೆಜ್ಜೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರವಲ್ಲ, ಪಕ್ಷದಲ್ಲೇ ಅಸಮಾಧಾನಕ್ಕೆ ಆಸ್ಪದ ಮಾಡಿಕೊಟ್ಟಿದೆ. ಕುಪೇಂದ್ರ ರೆಡ್ಡಿ ಕಣಕ್ಕಿಳಿಸಿ ಜೆಡಿಎಸ್ ಕಣ್ಣುಬಾಯಿ ಬಿಡುವಂತಾಗಿದೆ. ಕಾಂಗ್ರೆಸ್ ಕಣಕ್ಕಿಳಿಸಿರುವ ಮುಸ್ಲಿಂ ಸಮುದಾಯದ ಅಭ್ಯರ್ಥಿ ಬೆಂಬಲಿಸದಿದ್ದರೆ ಜೆಡಿಎಸ್​ನ ಜಾತ್ಯತೀತತೆ ಪ್ರಶ್ನಾರ್ಥಕವಾಗಿಯೇ ಉಳಿಯುವ ಆತಂಕ ಎದುರಾಗಿದೆ.

ಸಮಸ್ಯೆಗಳೇನು?: ಅಭ್ಯರ್ಥಿ ಕಣಕ್ಕಿಳಿಸುವ ಮುನ್ನ ರಾಜ್ಯ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿ ಎಐಸಿಸಿ ಮಟ್ಟದಲ್ಲಿ ಲಾಬಿ ನಡೆಸಿತು. ಅದು ಗೊತ್ತಾದ ಕೂಡಲೇ ಕಾಂಗ್ರೆಸ್ ರಾಜ್ಯ ನಾಯಕರು 2ನೇ ಅಭ್ಯರ್ಥಿ ಕಣಕ್ಕಿಳಿಸಿ ಜೆಡಿಎಸ್​ಗೆ ಸಡ್ಡು ಹೊಡೆದರು. ಇದು ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಹೊಂದಾಣಿಕೆ ರಾಜಕಾರಣಕ್ಕೆ ಹುಳಿ ಹಿಂಡಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆಯ ಕೊನೇ ದಿನಕ್ಕೂ ಒಂದು ದಿನ ಮುನ್ನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿದ ಟ್ವೀಟ್ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಕೊನೆಯ ಮೊಳೆ ಹೊಡೆದಿದೆ ಎಂದೇ ಪಕ್ಷದಲ್ಲಿ ಚರ್ಚೆ ನಡೆದಿದೆ. ಕುಮಾರಸ್ವಾಮಿ ನಡೆಯಿಂದ ಪಕ್ಷದಲ್ಲೂ ಕೆಲವು ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ. 4-5 ಶಾಸಕರು ಕಾಂಗ್ರೆಸ್ ಪರ, ಒಬ್ಬಿಬ್ಬ ಶಾಸಕರು ಬಿಜೆಪಿ ಪರ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದರೂ ಅಚ್ಚರಿ ಇಲ್ಲದ ಸ್ಥಿತಿ ನಿರ್ವಣವಾಗಿದೆ ಎಂಬ ಆತಂಕ ಪಕ್ಷದ ಮುಖಂಡರಲ್ಲಿದೆ.

9ಕ್ಕೆ ಜೆಡಿಎಸ್ ಶಾಸಕಾಂಗ ಸಭೆ: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೂ.9 ರಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಜೆ.ಪಿ. ಭವನದಲ್ಲಿ ಅಂದು ಸಂಜೆ 6.30ಕ್ಕೆ ಸಭೆ ನಡೆಯಲಿದ್ದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವ ವಹಿಸಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭಾಗವಹಿಸಲಿದ್ದಾರೆ.

ಮೈತ್ರಿಗೆ ಅಡ್ಡಗಾಲಾದ ಸಂಗತಿಗಳೇನು?

  • ರಾಜ್ಯ ನಾಯಕರನ್ನು ಕಡೆಗಣಿಸಿ ಎಐಸಿಸಿ ಜತೆ ಕೈ ಮಿಲಾಯಿಸಲು ಪ್ರಯತ್ನಿಸಿದ್ದು.
  • ದಿನ ಬೆಳಗಾದರೆ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹರಿಹಾಯುತ್ತಿರುವುದು.
  • ಆಡಳಿತ ಪಕ್ಷ ಬಿಟ್ಟು ಅಧಿಕೃತ ಪ್ರತಿಪಕ್ಷವನ್ನೇ ಟಾರ್ಗೆಟ್ ಮಾಡುತ್ತಿರುವುದು.
  • ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಅವರನ್ನು ನೇರವಾಗಿ ಟೀಕಿಸುತ್ತಿರುವುದು.
  • ಕಾಂಗ್ರೆಸ್ ಒಪ್ಪಿತ ಕಾಮನ್ ಕ್ಯಾಂಡಿಡೇಟ್ ಕೆ.ಸಿ.ವೀರೇಂದ್ರರನ್ನು ಕಣಕ್ಕಿಳಿಸದಿರುವುದು.
  • ನಾಮಪತ್ರ ಕೊನೆಯ ದಿನಕ್ಕೂ ಮುನ್ನಾ ದಿನ ಟ್ವೀಟ್ ಮಾಡಿ ಕಾಂಗ್ರೆಸ್ ಹೀಯಾಳಿಸಿದ್ದು.
  • ಮುಸ್ಲಿಂ ಸಮುದಾಯದ ಮುಂದೆ ಕಾಂಗ್ರೆಸ್​ನ್ನು ಖಳನಾಯಕನನ್ನಾಗಿ ಮಾಡುವ ಪ್ರಯತ್ನ.
  • ಕುಪೇಂದ್ರ ರೆಡ್ಡಿ ಕಣಕ್ಕಿಳಿಯುವ ಬಗ್ಗೆ ಕುಟುಂಬದಲ್ಲೇ ಭಿನ್ನಾಭಿಪ್ರಾಯ.
  • ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕೆಲವೇ ಕೆಲವು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡದ್ದು.
  • ಸಿದ್ದರಾಮಯ್ಯ ಜತೆ ಮಾತುಕತೆಗೆ ಸಮರ್ಥ ವ್ಯಕ್ತಿಗಳನ್ನು ಕಳುಹಿಸದೆ ಇದ್ದುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net