

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ನಡೆದ ವ್ಯವಹಾರಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಸುದ್ದಿಗಾರರ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, "ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅರುಣ್ ಕುಮಾರ್ ಎಂಬ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಅವರನ್ನು ಅಕ್ರಮವಾಗಿ ತೆಗೆದು ರಾಜಶೇಖರ್ ಅನ್ನುವ ಅಧಿಕಾರಿಯನ್ನು ನೇಮಕ ಮಾಡಿತು ಈ ಸರಕಾರ. ಅಲ್ಲಿ ವ್ಯವಹಾರ ನಡೆದಿದೆ ಅಂತ ಯಾರೋ ನ್ಯಾಯಾಲಯಕ್ಕ ಹೋದರು. ಕೋರ್ಟ್ ಛೀಮಾರಿ ಹಾಕಿದ ಮೇಲೆ ಮತ್ತೆ ರಾಜಶೇಖರ್ ಅವರನ್ನೇ ಮರು ನೇಮಕ ಮಾಡಲಾಯಿತು. ಇದು ಈ ಸರಕಾರದ ದಂಧೆಯ ಒಂದು ಸ್ಯಾಂಪಲ್" ಎಂದು ಹೇಳಿದರು.
"ಹಿಂದೆ 1,500 ಕೋಟಿ ರೂ. ಹಗರಣ ನಡೆದಿತ್ತು. ಕಮೀಷನ್ ಪಡೆದು ವರ್ಕ್ ಆರ್ಡರ್ ಕೊಟ್ಟ ಕಥೆ ಗೊತ್ತಿದೆ. ಸಂಬಂಧಪಟ್ಟ ಇಲಾಖೆಯ ಅನುಮತಿ ಇಲ್ಲದೆ 1,500 ಕೋಟಿ ರೂಪಾಯಿ ವರ್ಕ್ ಆರ್ಡರ್ ನೀಡಿದರು. ಆಗ ಎಚ್.ಸಿ. ಮಹದೇವಪ್ಪ ಅವರು ಆ ಇಲಾಖೆಯ ಮಂತ್ರಿ ಆಗಿದ್ದರು. ಉಳಿದದ್ದು ಎಲ್ಲರಿಗೂ ತಿಳಿದಿದೆ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ" ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.