

ನೋಯ್ಡಾ: ಟೋಲ್ ಪ್ಲಾಜಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಮಹಿಳೆಯ ವಿಡಿಯೋ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಉತ್ತರಪ್ರದೇಶದ ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಲುಹರ್ಲಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ಸಂಭವಿಸಿದ್ದು, ಟೋಲ್ ಪಾವತಿ ಮಾಡಲು ಕೇಳಿದ್ದಕ್ಕಾಗಿ ಮಹಿಳೆ ಸಿಬ್ಬಂದಿಯ ಕೂದಲನ್ನು ಎಳೆದಾಡಿದ್ದಾರೆ ಮತ್ತು ಆಕೆಯನ್ನು ನೆಲಕ್ಕೆ ಕಡೆವಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸಹೋದ್ಯೋಗಿಗಳು ಯುವತಿಯನ್ನು ಮಹಿಳೆಯ ಜಟಾಪಟಿಯಿಂದ ಬಿಡಿಸಿಕೊಂಡಿದ್ದಾರೆ.
ಟೋಲ್ ಪಾವತಿ ಮಾಡಿ ಎಂದು ಕೇಳಿದ್ದಕ್ಕೆ ಆಕ್ರೋಶಗೊಂಡ ಮಹಿಳೆ, ತನ್ನ ಕಾರನ್ನು ನಿಲ್ಲಿಸಿ, ಸಿಬ್ಬಂದಿಯ ಕೊಠಡಿಗೆ ನುಗ್ಗಿ ಆಕೆಯ ಕೂದಲನ್ನು ಎಳೆದಾಡಿ, ಮುಖವನ್ನು ಒತ್ತಿ ಹಿಡಿದಿದ್ದಾರೆ. ಬಳಿಕ ಸಿಬ್ಬಂದಿಯನ್ನು ಖುರ್ಚಿಯಿಂದ ಕೆಡವಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಟೋಲ್ ಪ್ಲಾಜಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 91 ಟೋಲ್ ಪ್ಲಾಜಾದ ಉಸ್ತುವಾರಿ ಕಂಪನಿ ನೀಡಿದ ದೂರಿನ ಮೇರೆಗೆ ಪೊಲೀಸರು ಇದೀಗ ವಿಚಾರಣೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).