

ಬೆಂಗಳೂರು: ಕರೊನಾ ವಿಶ್ವದಾದ್ಯಂತ ಹರಡಿಕೊಂಡಿದ್ದು ಕರ್ನಾಟಕದಲ್ಲಿಯೂ ಸಹ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಸೋಂಕು ಹರಡದಂತೆ ರಾಜ್ಯ ಸರ್ಕಾರ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಟ್ವಿಟ್ಟರ್ನಲ್ಲಿ ಕರೊನಾ ಬಗ್ಗೆ ಮೊದಲನೇ ಬಾರಿಗೆ ಮಾತನಾಡಿರುವ ಕುಮಾರಸ್ವಾಮಿಯವರು ಸಾಲು ಸಾಲು ಟ್ವೀಟ್ಗಳ ಮೂಲಕ ಕರೊನಾ ವೈರಸ್ನ ಸಮಸ್ಯೆ ಬಗೆಹರಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.
ಸುರಕ್ಷತಾ ಕ್ರಮಗಳನ್ನು ವಿವರಿಸುವ ವಿಚಾರ ಪ್ರಚಾರದ ಸರಕಾಗಬಾರದು. ಹಾಗೆ ಆಗಿದ್ದೇ ಆದರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಆತಂಕ ಸಮೂಹ ಸನ್ನಿಯಾಗಿ ಪರಿವರ್ತನೆಯಾಗಿ ಜನಜೀವನದ ಮೇಲೆ ನೇತ್ಯಾತ್ಮಕ ಪರಿಣಾಮಗಳು ಉಂಟಾಗದಿರಲಿ. ಕರೊನಾ ವೈರಸ್ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ ಎಂದು ಅವರು ನುಡಿದಿದ್ದಾರೆ.
ಕರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮ. ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಇತರ ರೋಗಿಗಳ ಜತೆ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ? ಇದರ ಬದಲು ಖಾಲಿ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಖಾಲಿ ಉಳಿದಿವೆ. ಅವುಗಳನ್ನು ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ Quarantine ಕೇಂದ್ರಗಳಾಗಿ ಪರಿವರ್ತಿಸಬೇಕು. ಜನನಿಬಿಡ ಪ್ರದೇಶಗಳಿಂದ ದೂರದಲ್ಲಿ Quarantine ಕೇಂದ್ರ ತರೆಯಬೇಕು. ಸೋಂಕಿತರ ರಕ್ತ ಮಾದರಿ ಸಂಗ್ರಹಕ್ಕೆ ಅವರಿರುವಲ್ಲಿಯೇ ವ್ಯವಸ್ಥೆಯಾಗಬೇಕು ಎಂದು ಕುಮಾರಸ್ವಾಮಿಯವರು ಬೇಡಿಕೆಯನ್ನಿಟ್ಟಿದ್ದಾರೆ.