

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರ್ಕಾರ ರಚನೆಗೆ ಕಸರತ್ತುಗಳು ಬಿರುಸಿನಿಂದ ಸಾಗಿದ್ದು, ಇಂದು ಸಂಸದರ ಸಭೆ ಕರೆಯಲಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸಂಸದರು ಇಂದು ಸಭೆ ಸೇರಿ ನರೇಂದ್ರ ಮೋದಿಯನ್ನು ತಮ್ಮ ನಾಯಕನೆಂದು ಆಯ್ಕೆ ಮಾಡಲಿದ್ದಾರೆ. ಆ ಮೂಲಕ 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೋದಿಯ ಹಾದಿ ಸುಗಮವಾಗಲಿದೆ.
ಎನ್ಡಿಎ ನಾಯಕರಾಗಿ ಮೋದಿ ಆಯ್ಕೆ ಬಳಿಕ ಮೈತ್ರಿಕೂಟದ ಹಿರಿಯ ಸದಸ್ಯರಾದ ಟಿಡಿಪಿಯ ಎನ್. ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್ ಮತ್ತು ಶಿವಸೇನಾ ನಾಯಕ ಏಕನಾಥ ಶಿಂದೆ ಅವರ ಜೊತೆಗೆ ಮೋದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ತಮಗೆ ಬೆಂಬಲ ನೀಡಿರುವ ಸಂಸದರ ಪಟ್ಟಿಯನ್ನು ಸಲ್ಲಿಸಲಿದ್ದಾರೆ ಎಂದು ಎನ್ಡಿಎ ಮಿತ್ರ ಪಕ್ಷಗಳ ಸದಸ್ಯರು ಹೇಳಿದ್ದಾರೆ.
ಇನ್ನೂ ನರೇಂದ್ರ ಮೋದಿ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗುವ ಕುರಿತು ಮಾತನಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ ಸ್ಥಾನದ ಬಗ್ಗೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ಮೋದಿ ನಾಯಕತ್ವದಲ್ಲಿ ಮತ್ತೆ ಸರ್ಕಾರ ಎಂಬ ಮಾಹಿತಿ ಇದೆ. ನಮಗೂ ಸಹ ಸಚಿವ ಸ್ಥಾನ ನೀಡ್ತಾರೆ ಎಂಬ ಮಾಹಿತಿ ಇದೆ. ನಮ್ಮಿಂದ ಒಳ್ಳೆ ಕೆಲಸ ಮಾಡಿಸಲು ಸಾಧ್ಯ ಎಂಬದು ವರಿಷ್ಠರಿಗೆ ಗೊತ್ತಿದೆ. ರಾಜ್ಯದ ಜನರಿಗೂ ಸಹ ಒಂದು ವಿಶ್ವಾಸ ಇದೆ.
ನಾಡಿನ ಜನತೆಗೆ ಒಳ್ಳೆಯದಾಗುವ ಖಾತೆ ಸಿಕ್ಕಿದರೆ ಉತ್ತಮ ಕೆಲಸ ಮಾಡುವೆ. ಮಂಜುನಾಥ್ಗೆ ಖಾತೆ ನೀಡುವ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ನನಗೆ ಮಂತ್ರಿ ಗಿರಿ ಕೊಡಬೇಕು ಎಂದು ಒತ್ತಡ ಹಾಕುತ್ತಿಲ್ಲ. ಬಿಜೆಪಿ ವರಿಷ್ಠರು ನೀಡಿದರೆ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.