ಪೆನ್​ಡ್ರೈವ್​ ಹಿಡಿದು ವಿಧಾನಸೌಧಕ್ಕೆ ಎಚ್​ಡಿಕೆ ಎಂಟ್ರಿ: ಸ್ಫೋಟಗೊಳ್ಳುತ್ತಾ ಸಚಿವರೊಬ್ಬರ ಲಂಚದ ಆಡಿಯೋ?

HD Kumaraswamy
Published on

ಬೆಂಗಳೂರು: ಇಂದಿನ ವಿಧಾನಸಭಾ ಕಲಾಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಪೆನ್​ಡ್ರೈವ್​ ಹಿಡಿದು ಬಂದಿದ್ದು, ಎಲ್ಲರ ಗಮನ ಸೆಳೆದಿದೆ. ಪೆನ್​ಡ್ರೈವ್​ನಲ್ಲಿ ಸರ್ಕಾರದ ವರ್ಗಾವಣೆ ದಂಧೆಯ ಬಗ್ಗೆ ಮಹತ್ವದ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ.

ಕಲಾಪಕ್ಕೆ ಹಾಜರಾಗುವ ಮುನ್ನ ವಿಧಾನಸೌಧದ ಮುಂದೆ ಎಚ್​ಡಿಕೆ ಪೆನ್​ಡ್ರೈವ್ ಪ್ರದರ್ಶನ ಮಾಡಿದರು. ಸಚಿವರೊಬ್ಬರ ಭ್ರಷ್ಟಾಚಾರ ವಿಚಾರ ಅದರಲ್ಲಿ ಅಡಗಿದೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಎಚ್​ಡಿಕೆ, ಸಾಕ್ಷಿ ಬೇಕು ಅಂತ ಹೇಳಿದ್ರಲ್ಲ ಅದಕ್ಕೆ ರೆಡಿ ಮಾಡಿ ಇಟ್ಟುಕೊಂಡಿದ್ದೀನಿ. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ವರ್ಗಾವಣೆ ದಂಧೆಯ ಪೆನ್ ಡ್ರೈವ್ ಎಂದು ಹೇಳಿದರು.

ನಾನು ನನ್ನ ಅವಧಿಯಲ್ಲಿ ಕೆಎಸ್​ಟಿ ಟ್ಯಾಕ್ಸ್ ಇಟ್ಟಿರಲಿಲ್ಲ. ತಾಜ್ ವೆಸ್ಟ್ ಎಂಡ್ ಹೋಟೆಲ್​ನವರು ದುಡ್ಡು ಕಟ್ಟಿ ಅಂತ ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಕಚೇರಿಗೆ ಬಿಲ್ ಕಳಿಸಿದ್ರಾ? ಎರಡ್ಮೂರು ಲಕ್ಷ ರೂಪಾಯಿ ಲಕ್ಷ ಖರ್ಚು ಮಾಡುವ ಯೋಗ್ಯತೆ ನಮಗಿಲ್ವಾ? ಯಾವುದೋ ಬ್ಲೂ ಫಿಲ್ಮ್​ ಅನ್ನು ಟೆಂಟ್​ನಲ್ಲಿ ತೋರಿಸಿಕೊಂಡು ಬಂದಿಲ್ಲ. ನಾನೇನು ರೌಡಿಗಳಿಗೆ ಎಣ್ಣೆ ಪೂರೈಕೆ ಮಾಡಿಕೊಂಡು ಬಂದಿದ್ದೀನಾ? ಇವರಿಂದ ಕಲಿಯುವ ದರಿದ್ರ ನಂಗೆ ಬಂದಿಲ್ಲ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆಶಿಗೆ ಎಚ್​ಡಿಕೆ ಟಾಂಗ್​ ನೀಡಿದರು.

ನನ್ನ ಆಸ್ತಿ ಬಗ್ಗೆ ಬೇಕಾದರೆ ತನಿಖೆ ಮಾಡಲಿ. ಸಿಎಂಗೆ ಹೇಳಿ ತನಿಖೆ ಮಾಡಿಸಲಿ, ನಾನೇನು ಅವರನ್ನು ಹಿಡಿದುಕೊಂಡಿದ್ದೀ‌ನಾ? ನಿನ್ನೆ ಎರಡು ವರ್ಗಾವಣೆ ಆಗಿದೆ. ಇಂಧನ ಇಲಾಖೆಯಲ್ಲಿ ಹತ್ತತ್ತು ಕೋಟಿಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ ಒಂದು ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ. ಪೆನ್​ಡ್ರೈವ್​ ನಲ್ಲಿ ಸಚಿವರೊಬ್ಬರ ಆಡಿಯೋ ಇದೆ. ವರ್ಗಾವಣೆ ದಂಧೆಗೆ ಹಣ ಕೇಳಿರುವ ಆಡಿಯೋ ಇದು ಎಂದು ಎಚ್​ಡಿಕೆ ತಿಳಿಸಿದರು.

ಎಚ್​ಡಿಕೆ ಪೆನ್​ಡ್ರೈವ್​ನಲ್ಲಿ ಏನಿದೆ?

ಪೆನ್​ಡ್ರೈವ್​ನಲ್ಲಿ ಸಚಿವರೊಬ್ಬರು ಲಂಚ ಕೇಳಿರುವ ಆಡಿಯೋ ಇದೆ ಎನ್ನಲಾಗಿದೆ. 30 ಲಕ್ಷ ರೂ. ಲಂಚ ಕೇಳಿರುವ ಆಡಿಯೋವಂತೆ. ಸರ್ಕಾರದ ಹಿರಿಯ ಸಚಿವರ ಆಡಿಯೋ ಎನ್ನಲಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧಿಸಿದ ಸಚಿವರೊಬ್ಬರು ಎಂಬ ಮಾಹಿತಿಯೂ ಇದೆ. ಇದೀಗ ಸರ್ಕಾರಕ್ಕೆ ಈ ಪೆನ್​ಡ್ರೈವ್ ಸಂಕಷ್ಟ ತರುತ್ತಾ? ಸಚಿವರು ರಾಜೀನಾಮೆ ನೀಡುತ್ತಾರಾ ಅನ್ನೋ ಪ್ರಶ್ನೆ ಆಡಿಯೋ ಬಿಡುಗಡೆ ಬಳಿ ಮುನ್ನೆಲೆಗೆ ಬರಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net