

ಎಚ್.ಡಿ.ಕೋಟೆ: ಆದಿವಾಸಿ ಜನರಿಗೆ ಸವಲತ್ತುಗಳನ್ನು ಕಾನೂನಾತ್ಮಕವಾಗಿ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹುಣಸೂರು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ತಿಳಿಸಿದರು.
ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಗುರುವಾರ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಮತ್ತು ಆರೋಗ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇನ್ನೂ 7 ದಿನಗಳ ಕಾಲ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಸೇರಿದಂತೆ ಇನ್ನಿತರ ವಿವಿಧ ದಾಖಲಾತಿ ವಿತರಣಾ ಕಾರ್ಯಕ್ರಮವನ್ನು ತಾಲೂಕು ಆಡಳಿತ ಹಾಗೂ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಭಾಗದ ಎಲ್ಲ ಹಾಡಿ ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ತಹಸೀಲ್ದಾರ್ ಸಣ್ಣರಾಮಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಉಪತಹಸೀಲ್ದಾರ್ ಮಹೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನಾರಾಯಣಸ್ವಾಮಿ, ಪಿಡಿಒ ದೇವರಾಜು, ಗ್ರಾಪಂ ಅಧ್ಯಕ್ಷ ಸುಬ್ರಮಣ್ಯ, ಸದ್ಯಸರಾದ ವೆಂಕಟೇಗೌಡ , ರಾಘವೇಂದ್ರ ಇತರರಿದ್ದರು.