

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಕ್ಕಳ ಸೋಗಿನಲ್ಲಿ ದುಷ್ಕರ್ಮಿಗಳಿಬ್ಬರು ಅಮಾಯಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ದೇವೇಗೌಡರ ಹೆಸರು ದುರುಪಯೋಗ ಪಡಿಸಿಕೊಂಡು ಮೋಸ ಮಾಡುತ್ತಿರುವವರ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಚ್ಡಿಡಿ ಅವರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಆರ್. ನಾರಾಯಣಪ್ಪ ಎಂಬುವವರು ದೂರು ನೀಡಿದ್ದಾರೆ. ಇದನ್ನೂ ಓದಿರಿ ಡ್ರಗ್ಸ್ ಮಾಫಿಯಾ ಕಾರಣಕ್ಕೆ ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ ಟೆನ್ಷನ್!
ತಾನು ಎಚ್.ಡಿ.ದೇವೇಗೌಡರ ಮೊಮ್ಮಗ ಎಂದೇಳಿಕೊಂಡು ನಿಶಾಂತ್ ಎಂಬಾತ, ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಲು ಬಂದಿದ್ದ ದೃಶ್ಯ ಕಾರು ಮಾರಾಟ ಮಳಿಗೆಯಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದೆ. ಇದೇ ರೀತಿ ಮತ್ತೊಬ್ಬ ಪ್ರದಿಪ್ ಸಹ 'ನಾನು ದೇವೇಗೌಡರ ಮೊಮ್ಮಗ. ಸರ್ಕಾರದ ವಿವಿಧ ಕೆಲಸಗಳನ್ನು ಮಾಡಿಸಿಕೊಡುತ್ತೇನೆ' ಎಂದು ಹೇಳಿಕೊಂಡು ಅಮಾಯಕರಿಗೆ ವಂಚನೆ ಮಾಡುತ್ತಿರುವ ಬಗ್ಗೆಯೂ ವಿಡಿಯೋ ಪತ್ತೆಯಾಗಿದೆ. ಈ ಇಬ್ಬರ ವಿಡಿಯೋಗಳು ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿದ್ದವು. ಕರೆ ಮಾಡಿ ಪ್ರಶ್ನೆ ಮಾಡಿದಾಗ ಡಿಲೀಟ್ ಆಗಿವೆ. ಮಾಜಿ ಪ್ರಧಾನಿ ಹೆಸರನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ನಾರಾಯಣಪ್ಪ ಮನವಿ ಮಾಡಿದ್ದಾರೆ.
ಈ ಮೇರೆಗೆ ಆರೋಪಿಗಳಾದ ನಿಶಾಂತ್ ಮತ್ತು ಪ್ರದೀಪ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಬನಶಂಕರಿ ಠಾಣೆ ಪೊಲೀಸರು ತಿಳಿಸಿದ್ದಾರೆ.