

ಬೆಂಗಳೂರು: ಕೆ.ಆರ್.ಪುರ ಸಮೀಪದ ಬಿನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರವರೆಗಿನ ಬೆಂಗಳೂರು ಉಪನಗರ (ಸಬ್ ಅರ್ಬನ್) ರೈಲ್ವೆ ಯೋಜನೆಯ ರೈಲ್ವೆ ನಿಲ್ದಾಣ ಕಾರಿಡಾರ್-2ರ ನಡುವಿನ 699 ಮರಗಳನ್ನು ಜು. 12ರವರೆಗೂ ಕಡಿಯದಂತೆ ಹೈಕೋರ್ಟ್ ನಿರ್ಬಂಧ ವಿಧಿಸಿ ಆದೇಶಿಸಿದೆ.
ಮರ ಅಧಿಕಾರಿಯೂ ಆಗಿರುವ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಳೆದ ಮೇ 29ರಂದು ರಸ್ತೆ ವಿಸ್ತಾರಣೆಗಾಗಿ 699 ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಿದ್ದರು. ರಾಜಧಾನಿಯಲ್ಲಿ ಮರ ಗಣತಿ ನಡೆಸುವಂತೆ ಕೋರಿ ದತ್ತಾತ್ರೇಯ ದೇವರು ಮತ್ತು ಬೆಂಗಳೂರು ಎನ್ವಿರಾನ್ಮೆಂಟಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಸಿ ಬಿಬಿಎಂಪಿ ಮರ ಅಧಿಕಾರಿಯ ಕ್ರಮವನ್ನು ಪ್ರಶ್ನಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸಿಜೆ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಜು. 12ಕ್ಕೆ ಮುಂದೂಡಿತು. ಅಲ್ಲದೆ, ಈ ಹಿಂದೆ ನೀಡಿದ್ದ ಆದೇಶವನ್ನು ಪರಿಶೀಲಿಸಿ ಈ ಕುರಿತು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪೀಠ ತಿಳಿಸಿತು.
ಅಲ್ಲದೆ, ಮಧ್ಯಂತರ ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿಗೆ ಸೂಚನೆ ನೀಡಿತು.