

ಹಾವೇರಿ: ಸುಶಿಕ್ಷಿತ ಮತ್ತು ಸುಭಿಕ್ಷ ಜಿಲ್ಲೆಯಾಗಿ ಹೊರಹೊಮ್ಮಿರುವ ಹಾವೇರಿ ಜಿಲ್ಲೆ ಬಗ್ಗೆ ಅಭಿಮಾನವಿದೆ. ಆದರೆ ಔದ್ಯೋಗಿಕ ಮತ್ತು ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನದ ಮೂಲಕ ಅಭಿವೃದ್ಧಿ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ನಗರದ ಗೆಳೆಯರ ಬಳಗದ ಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಾವೇರಿ ಜಿಲ್ಲೆ ರಜತೋತ್ಸವ ವರ್ಷದ ಮುಕ್ತಾಯ ಸಮಾರಂಭ ನಿಮಿತ್ತ ಭಾನುವಾರ ಏರ್ಪಡಿಸಿದ್ದ ನಮ್ಮ ಜಿಲ್ಲೆ- ನಮ್ಮ ಹೆಮ್ಮೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯಿಂದ ಹಾವೇರಿ ಜಿಲ್ಲೆಯನ್ನು ಪ್ರತ್ಯೇಕಿಸಲು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಬೇಡಿಕೆ ಇತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಈಡೇರಿರಲಿಲ್ಲ. ಜೆ.ಎಚ್. ಪಟೇಲ ಅವರ ಇಚ್ಛಾಶಕ್ತಿ ಮತ್ತು ಸಂಕಲ್ಪದಿಂದ ಹಾವೇರಿ ಜಿಲ್ಲೆಯ ಸ್ಥಳೀಯ ನಾಯಕರ ನಿರಂತರ ಹೋರಾಟ, ನ್ಯಾಯವಾದಿಗಳ ಸಂಘ ಮತ್ತು ವರ್ತಕರ ಸಂಘದ ಬೆಂಬಲದಿಂದ ಸ್ವತಂತ್ರ ಜಿಲ್ಲೆಯಾಗಿ ರಚನೆಗೊಳ್ಳಲು ಸಾಧ್ಯವಾಯಿತು. ಭವಿಷ್ಯದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಹಿರಿಯರ ತ್ಯಾಗ ಮತ್ತು ಪರಿಶ್ರಮದ ಫಲವಾಗಿ ಹಾವೇರಿ ಜಿಲ್ಲೆ ರಚನೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಆಗಲು ಯುವಕರಲ್ಲಿ ಕನಸುಗಳನ್ನು ಬಿತ್ತಬೇಕು. ಈ ವಿಚಾರ ಸಂಕಿರಣದ ಮೂಲಕ ಸಮಗ್ರ ವರದಿ ರಚಿಸಿ ಸರ್ಕಾರದ ಗಮನ ಸೆಳೆಯಬೇಕು. ಆಗ ಮಾತ್ರ ಮಾದರಿ ಜಿಲ್ಲೆಯಾಗಿಸಲು ಸಾಧ್ಯ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಎಸ್.ಬಿ. ಹಿರೇಮಠ, ಷಣ್ಮುಖಪ್ಪ ಮುಚ್ಚಂಡಿ, ಜೀವರಾಜ ಛತ್ರದ ಕ್ರಮವಾಗಿ ಜಿಲ್ಲಾ ನಿರ್ಮಾಣದ ಹೋರಾಟದ ಹಾದಿ, ಜಿಲ್ಲೆಯ ಪ್ರಗತಿ ಮತ್ತು ಅವಕಾಶಗಳು ಮತ್ತು ಜಿಲ್ಲೆಯ ಸಾಹಿತ್ಯ -ಸಂಸ್ಕೃತಿಯ ಅವಲೋಕನ ಕುರಿತು ವಿಷಯ ಮಂಡಿಸಿದರು. ಕಸಾಪ ತಾಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶ್ವನಾಥ ಹಿರೇಮಠ,. ಸತೀಶ ಕುಲಕರ್ಣಿ, ಎಂ.ಎಸ್. ಕೋರಿಶೆಟ್ಟರ, ಎಸ್.ಎನ್. ದೊಡ್ಡಗೌಡ್ರ, ಗುಹೇಶ್ವರ ಪಾಟೀಲ, ಬಿ.ಪಿ. ಶಿಡೇನೂರ, ಎಸ್.ಆರ್. ಹಿರೇಮಠ, ಈರಣ್ಣ ಬೆಳವಡಿ, ಸಿ.ಎನ್. ಪಾಟೀಲ, ಎಸ್.ಎನ್. ಮುಗಳಿ, ವೀರೇಶ ಜಂಬಗಿ, ರಾಘವೇಂದ್ರ ಎ.ಜಿ., ಬಿ.ಎಂ. ಜಗಾಪುರ, ಅಮೃತಮ್ಮ ಶೀಲವಂತರ, ದಾಕ್ಷಾಯಣಮ್ಮ ಗಾಣಿಗೇರ, ರೇಣುಕಾ ಗುಡಿಮನಿ ಮತ್ತಿತರರು ಉಪಸ್ಥಿತರಿದ್ದರು.