

ಹಾವೇರಿ: ನಗರದಲ್ಲಿ ಬ್ಲಡ್ ಬ್ಯಾಂಕ್ ಮಾಡುವ ಉದ್ದೇಶಕ್ಕೆ 5 ಲಕ್ಷ ರೂ. ನೀಡಲಾಗುವುದು ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ಪ್ರಯುಕ್ತ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾಸ್ಪತ್ರೆ ವತಿಯಿಂದ ಶನಿವಾರ ಏರ್ಪಡಿಸಿದ್ದ 1ನೇ ಹಂತದ ಹಾನಗಲ್ಲ ಹಾಗೂ ಹಾವೇರಿ ತಾಲೂಕಿನ ಆಶಾ ಕಾರ್ಯಕರ್ತರಿಗೆ ಕ್ಯಾನ್ಸರ್ ಕುರಿತ ಜಾಗೃತಿ, ತರಬೇತಿ ಹಾಗೂ ಪರೀಕ್ಷಾ ಶಿಬಿರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕಾಲದಲ್ಲಿ ಆರೋಗ್ಯ ಸವಾಲು ಎದುರಿಸುವ ನಾವು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರ ಸೇವೆ ಸ್ಮರಣೀಯವಾಗಿದೆ. ಎಲ್ಲ ಸಂಪತ್ತಿಕ್ಕಿಂತ ಆರೋಗ್ಯ ಬಹಳ ಮುಖ್ಯವಾಗಿದೆ. ಆರೋಗ್ಯದಿಂದ ಜನರು ಇದ್ದರೆ ಎಲ್ಲ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರೀಯಾಶೀಲತೆ ಮೆಚ್ಚಬೇಕು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ನಾವೆಲ್ಲರೂ ಸಹಕಾರ ನೀಡಬೇಕಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಇಂದಿನ ದಿನಮಾನದಲ್ಲಿ ಆರೋಗ್ಯ ಚನ್ನಾಗಿ ಇದ್ದರೆ ಏನೆಲ್ಲಾ ಸಾಧಿಸಬಹುದು. ಸ್ಥಳೀಯವಾಗಿ ಇರುವ ಆಶಾ ಕಾರ್ಯಕರ್ತರು ಜನರಿಗೆ ಉತ್ತಮ ಆರೋಗ್ಯ ಸಲಹೆ ಸೂಚನೆ ನೀಡಿದರೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ರೆಡ್ ಕ್ರಾಸ್ ಸಂಸ್ಥೆ ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬರುತ್ತಿದ್ದು ತಮ್ಮೆಲರ ಸಹಕಾರ ನೀಡುವಂತಾಗಬೇಕು ಎಂದರು.
ಗೌರವ ಕಾರ್ಯದರ್ಶಿಗಳಾದ ಡಾ. ನೀಲೇಶ ಎಂ.ಎನ್., ಸಂಸ್ಥೆ ಡಾ. ಸರಿತಾ, ಆಶಾ ಕಾರ್ಯಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ, ಡಾ. ಅಕ್ಷತಾ, ಡಾ. ಶೃತಿ, ಡಾ. ನೀತು, ಡಾ. ಗಗನ ಮಾಳೋದೆ ತರಬೇತಿ ನೀಡಿದರು.
ಡಿಎಚ್‌ಓ ರಾಘವೇಂದ್ರ ಸ್ವಾಮಿ ಎಚ್.ಎಸ್., ಟಿಎಚ್‌ಓ ಡಾ. ಪ್ರಭಾಕರ ಕುಂದೂರ, ರೆಡ್ ಕ್ರಾಸ್ ಸಂಸ್ಥೆಯ ಪ್ರಭು ಹಿಟ್ನಳ್ಳಿ, ನಿಂಗಪ್ಪ ಆರೇರ, ಹನಮಂತಪ್ಪ ಗೊಲ್ಲರ, ಉಡಚಪ್ಪ ಮಾಳಗಿ, ರವಿ ಹಿಂಚಿಗೇರ, ಶಂಕರ ಸುತಾರ, ಡಾ. ಅಂಕಿತ ಆನಂದ ಮತ್ತಿತರರು ಉಪಸ್ಥಿತರಿದ್ದರು.