ದೌರ್ಜನ್ಯ ತಡೆಗೆ ಅಗತ್ಯ ಕ್ರಮವಹಿಸಬೇಕು; ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ

21-RNR-09
Published on

ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಶಿಕ್ಷೆ ಕುರಿತು ಗ್ರಾಪಂ ಮಟ್ಟದಲ್ಲಿ ಎಲ್ಲ ಸಮುದಾಯಗಳ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಜಿಲ್ಲೆಯಲ್ಲಿ ದೌರ್ಜನ್ಯ ತಡೆಗೆ ಅಗತ್ಯ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೌರ್ಜನ್ಯ ಪ್ರಕರಣಗಳ ಕುರಿತು ದಾವಣಗೆರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್​.ಪಿ. ಅಧ್ಯಕ್ಷತೆಯಲ್ಲಿ ಹಾವೇರಿಯಲ್ಲಿ ದಲಿತ ಮುಖಂಡ ಸಭೆ ಆಯೋಜಿಸಿ, ದೌರ್ಜನ್ಯ ಪ್ರಕರಣ ತಡೆ ಕುರಿತು ಅರಿವು ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕುವಾರು ಹಾಗೂ ಪೊಲೀಸ್​ ಠಾಣಾವಾರು ದೌರ್ಜನ್ಯ ಪ್ರಕರಣಗಳ ಮಾಹಿತಿ ನೀಡಿದರೆ, ಅಂತಹ ಪ್ರದೇಶಗಳಲ್ಲಿ ಅರಿವು ಮೂಡಿಸುವ ಮೂಲಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಸಹಾಯವಾಗುತ್ತದೆ. ದೌರ್ಜನ್ಯ ಪ್ರಕರಣದ ನಿಖರ ಮಾಹಿತಿ ತಿಳಿದುಕೊಳ್ಳಬೇಕು. ಅಪರಾಧಿಗೆ ಶಿಕ್ಷೆಯಾಗಬೇಕು, ನಿರಪರಾಧಿಗೆ ಶಿಕ್ಷೆಯಾಗಬಾರದು. ಎಸ್​.ಸಿ.ಎಸ್​.ಪಿ. ಹಾಗೂ ಟಿ.ಎಸ್​.ಪಿ. ಯೋಜನೆಗೆ ಮೀಸಲಾದ ಅನುದಾನ ಆಯಾ ಸಾಲಿನಲ್ಲೇ ವೆಚ್ಚವಾಗಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ತಲುಪಬೇಕು.

ನಗರ ಹಾಗೂ ಗ್ರಾಮೀಣ ಸ್ಥಳಿಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಪೌರಕಾಮಿರ್ಕರಿಗೆ ಕಾಲಕಾಲಕ್ಕೆ ವೇತನ ಪಾವತಿಯಾಗಬೇಕು. ತಾಂಡಾಗಳಲ್ಲಿ ಡಾ.ಬಿ.ಆರ್​.ಅಂಬೇಡ್ಕರ ಅವರ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಬೇಕು. ಭರಡಿ ಗ್ರಾಮದಲ್ಲಿ ಸ್ಮಶಾನದ ಜಾಗದ ಸಮಸ್ಯೆ, ಮರಡೂರ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿ ಇಲ್ಲ, ಸವಣೂರ ಗ್ರಾಮದಲ್ಲಿ 2014ರಲ್ಲಿ 20 ಎಸ್ಸಿ ಕುಟುಂಬಗಳಿಗೆ ಪಟ್ಟಾ ನೀಡಲಾಗಿದೆ. ಆದರೆ ಆರ್​.ಟಿ.ಸಿ. ಇಂಡೀಕರಣ ಮಾಡಿಲ್ಲ, ಹರವಿ ಗ್ರಾಮದಲ್ಲಿ ನೀರು ಸಂಗ್ರಹ ಟ್ಯಾಂಕ್​ ಶಿಥಿಲಗೊಂಡಿದ್ದು, ಆ ಟ್ಯಾಂಕ್​ ನೀರು ಸೋರಿಕೆಯಾಗಿ ನಾಲ್ಕು ಮನೆಗಳಿಗೆ ಜೌಗು ಹಿಡಿದಿದೆ, ಹಿರೇಮಳ್ಳಿಹಳ್ಳಿ ಎಸ್​.ಸಿ. ಕಾಲೋನಿಗೆ ಹೊಸ ಅಂಗನವಾಡಿ ಮಂಜೂರು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ ಶಿವರಾಜ ಹರಿಜನ, ಸಂಜಯಗಾಂಧಿ, ಬಸವರಾಜ ಹೆಡಿಗ್ಗೊಂಡ, ಎನ್​.ಎಂ. ಗಾಳೆಮ್ಮನವರ, ಜಗದೀಶ ಹರಿಜನ, ರಮೇಶ ಕೊರವರ, ಅಜ್ಜಪ್ಪ ಗೋಣೆಮ್ಮನವರ, ಮಲ್ಲೇಶ ದೇವಗಿರಿ ಅವರುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ$್ಮಣ ಶಿರಕೋಳ, ಜಿಪಂ ಉಪ ಕಾರ್ಯದಶಿರ್ ಪುನಿತ್​, ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ಜಿಲ್ಲಾ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಮಠ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net