ಯುವ ಪೀಳಿಗೆಗೆ ಒಳ್ಳೆಯ ಬರಹ ನೀಡಿ; ಪ್ರೇಮಾನಂದ

6-RNR-11
Published on

ಹಾವೇರಿ: ಸತತ ಅಧ್ಯಯನ, ಪರಿಶ್ರಮ ಹಾಗೂ ಲೋಕಾನುಭವದದಿಂದ ರೂಪುಗೊಂಡ ಕ್ರಿಯಾಶೀಲತೆಯಿಂದ ಸಾರ್ವತ್ರಿಕವಾದ ಸೃಜನಶೀಲ ಕಾವ್ಯ ಮೂಡುತ್ತದೆ. ಇಂದಿನ ಯುವ ಪೀಳಿಗೆಗೆ ಸಮಾಜಕ್ಕೆ ಒಳ್ಳೆಯ ಬರಹಗಳನ್ನು ನೀಡಿ ಸಮಾಜದ ಉನ್ನತಿಗಾಗಿ ಶ್ರಮಿಸಬೇಕೆಂದು ಎಂದು ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಡಾ. ಪ್ರೇಮಾನಂದ ಲಕ್ಕಣ್ಣವರ ಹೇಳಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾ ಬರಹಗಾರರ ಸಂಘದ ಉದ್ಘಾಟನೆ, ಕೃತಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಶೈಲಜಾ ಕೋರಿಶೆಟ್ಟರ ಅವರ ಕಾವ್ಯ ಲಹರಿ ಕವನಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬರಹಗಾರರು ಸಮಷ್ಟಿಪ್ರಜ್ಞೆಯುಳ್ಳವರಾಗಿರಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾಜಮುಖಿ ಬರಹಗಳು ಇಂದಿನ ಅವಶ್ಯಕತೆಯಾಗಿದೆ ಎಂದರು.

ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಮಾನತಾಡಿ, ಕಾವ್ಯ ಮನಸ್ಸನ್ನು ಪ್ರಪುಲ್ಲಗೊಳಿಸಿ ಬದುಕಿಗೆ ಉತ್ಸಾಹವನ್ನು ಪ್ರೇರಣೆಯನ್ನು ಒದಗಿಸಬೇಕು. ಆಧುನಿಕತೆಯ ಸೋಂಕಿನಿಂದ ಛಿದ್ರಗೊಳ್ಳುತ್ತಿರುವ ಮನಸ್ಸು ಮತ್ತು ಸಂಬಂಧಗಳನ್ನು ಬೆಸೆಯುವ ಸಾಹಿತ್ಯ ಇವತ್ತಿನ ತುರ್ತು ಅಗತ್ಯವಾಗಿದೆ ಎಂದರು.

ಜಿಲ್ಲಾಧ್ಯಕ್ಷೆ ಶೈಲಜಾ ಕೋರಿಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. 15ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.

ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯಕ ಲಂಬಾಣಿ, ಸಂಘದ ಗೌರವಾಧ್ಯಕ್ಷೆ ಸಿದ್ದುಮತಿ ನೆಲವಗಿ, ಜಗದೀಶ ಮಾರಾಜಪೇಟೆ, ಎಂ.ಎಸ್​. ಕೋರಿಶೆಟ್ಟರ, ಅಜ್ಜಪ್ಪಗೌಡ ಗೌಡಪ್ಪನವರ, ತಾಳಿಕೋಟೆಯ ರಾಹುಲ್​, ರಜಪೂತ ಪುನೀತಕುಮಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net