

ಮುಂಬೈ: ಸಮಾಜವನ್ನು ಉಳಿಸಬೇಕಾದರೆ ಹಿಂದು ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದ ಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಕರೆ ನೀಡಿದ್ದಾರೆ.
ನಾಗುರದಲ್ಲಿ ನಡೆದ 'ಕಥಾಳೆ ಕುಲ್ ಸಮ್ಮೇಳನ್'ದಲ್ಲಿ ಮಾತನಾಡಿದ ಭಾಗವತ್, ಜನಸಂಖ್ಯೆ ದರ 2.1ಕ್ಕಿಂತ ಕೆಳಗೆ ಕುಸಿದರೆ ಸಮಾಜ ನಾಶವಾಗುತ್ತದೆ. ಹಾಗಾಗಿ ಅದು ಕನಿಷ್ಠ ಮೂರು ಆಗಬೇಕು ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಹೇಳಿಕೆಗೆ ಪೂರಕವಾಗಿ ಅವರು ಜನಸಂಖ್ಯೆ ಅಧ್ಯಯನ ವರದಿಯನ್ನು ಉಲ್ಲೇಖಿಸಿದರು. ಒಂದು ಸಮುದಾಯದ ಜನಸಂಖ್ಯೆಯು 2.1ರ ಫಲವಂತಿ ಕೆಗಿಂತ ಕೆಳಗಿದ್ದರೆ ಆ ಸಮಾಜ ವಿನಾಶವಾಗುತ್ತದೆ ಎಂದು ಜನಸಂಖ್ಯಾ ಅಧ್ಯಯನ ಹೇಳುತ್ತದೆ ಎಂದು ವಿವರಿಸಿದ್ಧಾರೆ.
ನಮ್ಮ ದೇಶದ ಜನಸಂಖ್ಯಾ ನೀತಿಯನ್ನು 1998 ಅಥವಾ 2002ರಲ್ಲಿ ರೂಪಿಸಲಾಗಿದೆ. ಯಾವುದೇ ಸಮುದಾಯದ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಾಗಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜನಸಂಖ್ಯಾ ವಿಜ್ಞಾನದ ಪ್ರಕಾರ ಒಂದು ಕುಟುಂಬವು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ (RSS) ಮೋಹನ್ ಭಾಗವತ್ (Mohan Bhagwat) ಹೇಳಿದ್ಧಾರೆ.
ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿದ AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಪ್ರಧಾನಿ ನರೇಂದ್ರ ಮೋದಿ ಅವರು, ‘ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂದು ಲೋಕಸಭೆ ಚುನಾವಣೆ ವೇಳೆ ಕಿಡಿಕಾರಿದ್ದರು. ಈಗ ಭಾಗವತ್ 3 ಮಕ್ಕಳ ಹೆರಿ ಎನ್ನುತ್ತಿದ್ದಾರೆ. ಹೀಗಾಗಿ ಆರೆಸ್ಸೆಸ್‌ನವರು ಇನ್ನು ಮದುವೆ ಆಗಲು ಆರಂಭಿಸಬೇಕು ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರ್ಜೆಡಿ ವಕ್ತಾರ, ಬಿಜೆಪಿಯ ನಾಯಕರು ಆಗಾಗ್ಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುತ್ತಾರೆ. ಈಗ ನೋಡಿದರೆ ಆರ್‌ಎಸ್‌ಎಸ್ ಮುಖ್ಯಸ್ಥರು ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಪ್ರತಿಪಾದಿಸುತ್ತಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಮೊದಲು ತಮ್ಮ ವಿರೋಧಾಭಾಸಗಳನ್ನು ಬಗೆಹರಿಸಿಕೊಳ್ಳಬೇಕು. ಜನಸಂಖ್ಯೆ ನಿಯಂತ್ರಣಕ್ಕಾಗಿ ಸರ್ಕಾರ ಜಾಗೃತಿ ಅಭಿಯಾನಗಳನ್ನು ಉತ್ತೇಜಿಸುತ್ತದೆ. ಆದರೆ, ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆಯೂ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತದೆ ಎಂದು ಕಿಡಿಕಾರಿದ್ದಾರೆ.