ಸ್ಪಷ್ಟನೆ ಕೇಳಿ ವರಿಷ್ಠರಿಂದ ನೋಟಿಸ್​; ವಾಸ್ತವಾಂಶವನ್ನು ಪ್ರಸ್ತುತಪಡಿಸುತ್ತೇನೆ ಎಂದ BJP MLA ಬಸನ್​ಗೌಡ ಪಾಟೀಲ್ ಯತ್ನಾಳ್​​

Basangouda Patil Yatnal
Published on

ಬೆಂಗಳೂರು: ರಾಜ್ಯ ಬಿಜೆಪಿ (BJP) ನಾಯಕರ ವಿರುದ್ಧ ಬಹಿರಂಗ ಟೀಕೆ, ಆರೋಪ, ಕೇಂದ್ರ ನಾಯಕರ ಸೂಚನೆಯನ್ನೂ ಕಡೆಗಣಿಸಿದ ಶಾಸಕ (BJP MLA) ಬಸನಗೌಡ ಪಾಟೀಲ ಯತ್ನಾಳ್​ಗೆ ಪಕ್ಷದ (BJP) ವರಿಷ್ಠರು ಶೋಕಾಸ್​ ನೋಟಿಸ್​ ಜಾರಿ ಮಾಡಿದ್ದು, ಮುಂದಿನ 10 ದಿನದೊಳಗಾಗಿ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.

ತಮಗೆ ನೋಟಿಸ್​ ಜಾರಿ ಮಾಡಿರುವ ಬಗ್ಗೆ ಶಾಸಕ ಬಸನ್​​ಗೌಡ ಪಾಟೀಲ್​ ಯತ್ನಾಳ್​ ಪ್ರತಿಕ್ರಿಯಿಸಿದ್ದು, ವರಿಷ್ಠರ ನೋಟಿಸ್​ಗೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ಉತ್ತರ ನೀಡುತ್ತೇನೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ಪ್ರಸ್ತುತಪಡಿಸುತ್ತೇನೆ. ಹಿಂದುತ್ವದ ಹೋರಾಟ, ಭ್ರಷ್ಟಾಚಾರದ ವಿರೋಧ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ಕುಟುಂಬ ರಾಜಕೀಯ ವಿರುದ್ಧದ ನನ್ನ ಬದ್ಧತೆ ಅಚಲವಾಗಿ ಉಳಿಯುತ್ತದೆ ಎಂದು ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಶೋಕಾಸ್ ನೋಟಿಸ್​​ನಲ್ಲಿ ಏನಿದೆ ?

ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ, ರಾಜ್ಯ ಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನಿಮ್ಮ ನಿರಂತರ ವಾಗ್ದಾಳಿ, ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸುವುದು, ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಎಲ್ಲ ವಿಷಯಗಳ ಬಗ್ಗೆ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಸಾರ್ವಜನಿಕ ಹೇಳಿಕೆಗಳು ಮತ್ತು ನಿಲುವುಗಳನ್ನು ಮಾಧ್ಯಮಗಳು ಮತ್ತು ವಿವಿಧ ಪಕ್ಷದ ವೇದಿಕೆಗಳಲ್ಲಿ ಮಾತನಾಡಿರುವುದು ವರದಿಯಾಗಿದೆ.

ಈ ಹಿಂದೆಯೂ ಹಲವು ಬಾರಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಸದ್ವರ್ತನೆಯ ಭರವಸೆ ನೀಡಿದ್ದರೂ ನಿಮ್ಮ ಅಶಿಸ್ತಿನ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಿರುವುದು ಆತಂಕಕಾರಿ ಸಂಗತಿ. ನಿಮ್ಮ ಹಿರಿತನ ಮತ್ತು ಪಕ್ಷದಲ್ಲಿನ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು, ಈ ಹಿಂದೆ ನೀವು ಸಲ್ಲಿಸಿದ ವಿವರಣೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿಯು ಮೃದು ನಿಲುವು ತಳೆಯಿತು.

ಶಿಸ್ತಿನ ಉಲ್ಲಂಘನೆ

ಆದರೆವರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಪಕ್ಷದ ಅಧಿಕೃತ ನಿಲುವನ್ನು ಧಿಕ್ಕರಿಸಿ ಪಕ್ಷದ ನಾಯಕರ ವಿರುದ್ಧ ನೀವು ಮಾಡಿದ ಸುಳ್ಳು, ತಥಾಕಥಿತ ಆರೋಪಗಳು, ಬಿಜೆಪಿ ಪಕ್ಷದ ನಿಯಮಗಳ 25ನೇ ವಿಧಿಯಲ್ಲಿ ವ್ಯಾಖ್ಯಾನಿಸಿದಂತೆ ಪಕ್ಷದ ಶಿಸ್ತಿನ ಗಂಭೀರ ಉಲ್ಲಂಘನೆಯಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ವಿರುದ್ಧ ಪಕ್ಷವು ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂಬುದಕ್ಕೆ ದಯವಿಟ್ಟು ಕಾರಣ ತೋರಿಸಿ. ಈ ಸೂಚನೆಯ ಸ್ವೀಕೃತಿಯಿಂದ ಹತ್ತು ದಿನಗಳಲ್ಲಿ ವಿವರಣೆಯನ್ನು ಸದಸ್ಯ ಕಾರ್ಯದರ್ಶಿ, ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಸಲ್ಲಿಸಬೇಕು.

ನಿಗದಿತ ಗಡುವಿನೊಳಗೆ ಸಮಜಾಯಿಷಿ ನೀಡದಿದ್ದರೆ ಹೇಳುವುದು ಏನೂ ಇಲ್ಲವೆಂದು ಪರಿಗಣಿಸಿ ಮುಂದಿನ ಕ್ರಮವಹಿಸಬೇಕಾಗುತ್ತದೆ ಎಂದು ಶೋಕಾಸ್ ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net