

ಜೀವನಶೈಲಿಯಲ್ಲಿ ಆಗಿರುವ ವ್ಯಾಪಕ ಬದಲಾವಣೆ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೆಚ್ಚಿಸಿದ್ದು, ಕಳವಳಕ್ಕೆ ಕಾರಣವಾಗಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಜನರ ಕೌಟುಂಬಿಕ ಬಜೆಟ್ ಕೂಡ ಏರುಪೇರಾಗುತ್ತಿದ್ದು, ಆರ್ಥಿಕ ಸಂಕಷ್ಟದ ಪ್ರಮಾಣ ಹೆಚ್ಚುತ್ತಿದೆ. ಹಿಂದೆಲ್ಲ ಹಿರಿಯರು ಆಹಾರವೇ ಔಷಧ ಎಂಬ ವಿವೇಚನೆಯಿಂದ ಉತ್ತಮ ಆಹಾರ ಪದ್ಧತಿ, ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ಆಗ ಆಹಾರದ ಗುಣಮಟ್ಟವೂ ಉತ್ತಮವಾಗಿತ್ತು. ಈಗಿನಷ್ಟು ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆ ಇರಲಿಲ್ಲ.
ಮತ್ತೊಂದೆಡೆ, ಫಾಸ್ಟ್ಫುಡ್, ಬೀದಿಬದಿ ತಿಂಡಿ ಸೇರಿದಂತೆ ಅನಾರೋಗ್ಯವನ್ನು ಆಹ್ವಾನಿಸುವ ಆಹಾರ ಸೇವನೆ ತಂದೊಡ್ಡುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಈ ಸಮಸ್ಯೆಗಳ ಬಗ್ಗೆ ಕಾಲಕಾಲಕ್ಕೆ ಆರೋಗ್ಯ ತಜ್ಞರು ಮಾತನಾಡುತ್ತ, ಎಚ್ಚರಿಸುತ್ತಲೇ ಬಂದಿದ್ದಾರೆ. ಜಗತ್ತಿನಾದ್ಯಂತ ಜನರಲ್ಲಿ, ಅದರಲ್ಲೂ ಮಕ್ಕಳಲ್ಲಿ ಬೊಜ್ಜು ಪ್ರಮಾಣ ಹೆಚ್ಚುತ್ತಿದೆ. ಅಧ್ಯಯನವೊಂದರ ಪ್ರಕಾರ ಎಂಟು ಜನರ ಪೈಕಿ ಒಬ್ಬರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2022ರಲ್ಲಿ ಜಾಗತಿಕವಾಗಿ 250 ಕೋಟಿ ಜನರು ತಮ್ಮ ಎತ್ತರಕ್ಕೆ ಸರಿಯಾಗಿ ಇರಬೇಕಾದ ತೂಕಕ್ಕಿಂತ ಅಧಿಕ ತೂಕವನ್ನು ಹೊಂದಿದ್ದಾರೆ.
ಅನಾರೋಗ್ಯಕರ ತಿಂಡಿ ತಿನಿಸುಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ಕೇಂದ್ರ ಆರೋಗ್ಯ ಸಚಿವಾಲಯ, ಸಮೋಸಾ, ಜಿಲೇಬಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂಬ ಸುದ್ದಿ ಸೋಮವಾರ ಹೊರಬಿದ್ದಿತ್ತು. ಆದರೆ, ಮಂಗಳವಾರ ಸ್ಪಷ್ಟನೆಯೊಂದು ಬಂದಿದ್ದು, ಆರೋಗ್ಯ ಸಚಿವಾಲಯ ಯಾವುದೇ ಎಚ್ಚರಿಕೆ ಸಂದೇಶ ರವಾನಿಸಿಲ್ಲ ಎಂದು ಹೇಳಲಾಗಿದೆ. ಈ ತಾಂತ್ರಿಕ ಕ್ರಮ ಅಥವಾ ಪ್ರಕ್ರಿಯೆ ಏನೇ ಇರಲಿ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿಯಿಂದ ಅಧಿಕ ರಕ್ತದೊತ್ತಡ ಮತ್ತು ದಿಢೀರ್ ಹೃದಯಾಘಾತಗಳು ಹೆಚ್ಚುತ್ತಿದ್ದು, 50 ವರ್ಷದೊಳಗಿನವರೇ ಪ್ರಾಣ ಕಳೆದುಕೊಳ್ಳುತ್ತಿರುವುದು ಚಿಂತೆಗೆ ಕಾರಣವಾಗಿದೆ. ಇದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಕಾಯಿಲೆ ಬಂದ ಬಳಿಕ ಔಷಧ ಸೇವಿಸುವುದು, ಅದಕ್ಕಾಗಿ ದೊಡ್ಡ ಮೊತ್ತವನ್ನು ವಿನಿಯೋಗಿಸುವುದಕ್ಕಿಂತ ಆಹಾರ ಪದ್ಧತಿಯಲ್ಲೇ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ.
ಹೀಗಾಗಿ, ಎಲ್ಲ ವಯೋಮಾನದವರು ಜೀವನಶೈಲಿಯನ್ನು ಅವಲೋಕಿಸಿಕೊಂಡು, ಆರೋಗ್ಯಕರ ಜೀವನಶೈಲಿಯತ್ತ ಮರಳಬೇಕಾದ ಅಗತ್ಯವಿದೆ. ಅಂದರೆ, ಒಂದಿಷ್ಟು ವ್ಯಾಯಾಮ, ನಡಿಗೆ, ಗುಣಮಟ್ಟದ ಮತ್ತು ತಾಜಾ ಆಹಾರ ಸೇವನೆಯಂಥ ಸರಳ ಕ್ರಮಗಳ ಅನುಷ್ಠಾನ ಕೂಡ ದೊಡ್ಡಮಟ್ಟದಲ್ಲಿ ಬದಲಾವಣೆ ತರಬಲ್ಲವು. ‘ಬೊಜ್ಜು ಕಡಿಮೆ ಮಾಡಿಕೊಳ್ಳಲು ಮತ್ತು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಅಡುಗೆ ಎಣ್ಣೆ ಬಳಕೆಯಲ್ಲಿ ಪ್ರತಿ ತಿಂಗಳು ಶೇಕಡ 10ರಷ್ಟು ಕಡಿತ ಮಾಡಿ. ಇದನ್ನು ಸವಾಲಾಗಿ ಸ್ವೀಕರಿಸಿ. ಏಕೆಂದರೆ, ಅಧಿಕ ಅಡುಗೆ ಎಣ್ಣೆ ಬಳಕೆಯಿಂದ ಹೃದಯ ಕಾಯಿಲೆ, ಮಧುಮೇಹ ಮತ್ತು ಅಧಿಕ ಒತ್ತಡಗಳಂಥ ರೋಗಗಳು ಬರುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಫೆಬ್ರವರಿಯಲ್ಲಿ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಹೇಳಿದ್ದರು. ಆರೋಗ್ಯಕ್ಕೆ ಮಾರಕವಾದ ಸಂಗತಿಗಳನ್ನು ದೂರ ಮಾಡಬೇಕು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಕಾಳಜಿ ವಹಿಸುವುದು ಈಗಿನ ಅಗತ್ಯ.