ಹತ್ರಾಸ್ ಕಾಲ್ತುಳಿತ ಪ್ರಕರಣ: ಪ್ರಮುಖ ಆರೋಪಿ ಮಧುಕರ್​​ಗೆ 14 ದಿನ ನ್ಯಾಯಾಂಗ ಬಂಧನ

Untitled-design-2024-07-06T192800.211
Published on

ಲಖನೌ: ಹತ್ರಾಸ್ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಅವರನ್ನು ಉತ್ತರ ಪ್ರದೇಶದ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಘಟನೆಗೆ ಸಂಬಂಧಿಸಿದಂತೆ ಹತ್ರಾಸ್‌ನ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಏಕೈಕ ಆರೋಪಿ ಮಧುಕರ್ ಆಗಿದ್ದಾನೆ.

ಕಳೆದ ಮಂಗಳವಾರ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟಿದ್ದರು. ಬೋಧಕ ಬಾಬಾ ಸೂರಜ್‌ಪಾಲ್ ಅವರ ಸೇವಕರು ಮತ್ತು ಸತ್ಸಂಗದ ಸಂಘಟಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದರು. ಇದಕ್ಕೂ ಮುನ್ನ 6 ಮಂದಿ ಸಿಕ್ಕಿಬಿದ್ದಿದ್ದರು. ಇಲ್ಲಿಯವರೆಗೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್​ನನ್ನು ಶುಕ್ರವಾರ ಬಂಧಿಸಲಾಯಿತು. ಬಾಬಾ ಅವರೊಂದಿಗಿನ ಅವರ ಸಂಪರ್ಕಗಳ ಬಗ್ಗೆ ಆತನನ್ನು ವಿವರವಾಗಿ ಪ್ರಶ್ನಿಸಲಾಗುವುದು ಮತ್ತು ಸಂಘಟನಾ ಸಮಿತಿಯ ಇತರ ಪ್ರಮುಖ ಸದಸ್ಯರ ಬಗ್ಗೆ ಮಾಹಿತಿಯನ್ನು ಸಹ ಸಂಗ್ರಹಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧುಕರ್​​​ನನ್ನು ಇತ್ತೀಚೆಗೆ ಕೆಲವು ರಾಜಕೀಯ ಪಕ್ಷಗಳು ಸಂಪರ್ಕಿಸಿವೆ. ಅವರ ಹಣಕಾಸಿನ ವಹಿವಾಟು ಮತ್ತು ಅವರಿಗೆ ಹಣ ಬರುತ್ತಿರುವ ಮೂಲವನ್ನು ಜತೆಗೆ ಅವರ ಫೋನ್​ ಕರೆಗಳ ಮಾಹಿತಿಯನ್ನು ವಿವರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾರಾಯಣ ಸರ್ಕಾರ್ ಹರಿ ಅಥವಾ ಸೂರಜ್ ಪಾಲ್ ಸಿಂಗ್ ಎಂದೂ ಕರೆಯಲ್ಪಡುವ ಭೋಲೆ ಬಾಬಾನ ಎಲ್ಲಾ ಪ್ರಮುಖ ಚಟುವಟಿಕೆಗಳನ್ನು ಮಧುಕರ್ ಮತ್ತು ಇತರ ನಿಕಟ ಸಹಾಯಕರು ಹತ್ರಾಸ್‌ನಲ್ಲಿ ನಿರ್ವಹಿಸುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net