

ಬೆಂಗಳೂರು: ಲೋಕಸಭೆ ಚುನಾವಣಾ ಪ್ರಚಾರದ ವೇಳೆ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ರಾಜ್ಯದಲ್ಲಿ 23 ದೂರು ದಾಖಲಾಗಿದ್ದು, ಈ ಪೈಕಿ 12 ಬಿಜೆಪಿ ವಿರುದ್ಧ 12 ಪ್ರಕರಣ ದಾಖಲಾಗಿವೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದರು.
ದ್ವೇಷ ಭಾಷಣ ಆರೋಪದಡಿ ಬಿಜೆಪಿ ನಾಯಕರ ವಿರುದ್ಧ 12, ಕಾಂಗ್ರೆಸ್ ನಾಯಕರ ವಿರುದ್ಧ 9 ಹಾಗೂ ಜೆಡಿಎಸ್ ನಾಯಕರ ವಿರುದ್ಧ 2 ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮತದಾರರಿಗೆ ಆಮಿಷ ಒಡ್ಡಿದ ಆರೋಪದಡಿ 28 ಪ್ರಕರಣದಾಕಲಾಗಿದ್ದು, ಬಿಜೆಪಿ ವಿರುದ್ಧ 8, ಕಾಂಗ್ರೆಸ್ ವಿರುದ್ಧ 9, ಜೆಡಿಎಸ್ ವಿರುದ್ಧ 3 ಹಾಗೂ ಪಕ್ಷೇತರರ ವಿರುದ್ಧ 8 ಪ್ರಕರಣ ದಾಖಲಿಸಲಾಗಿದೆ.
ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ಆರೋಪದ ಮೇಲೆ ಬಿಜೆಪಿ ವಿರುದ್ಧ 8, ಕಾಂಗ್ರೆಸ್ ವಿರುದ್ಧ 6, ಜೆಡಿಎಸ್ ವಿರುದ್ಧ 1 ಪ್ರಕರಣ ದಾಖಲಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಡಿ 189 ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ಪೆನ್ ಡ್ರೈವ್ ವಿರುದ್ಧ ದೂರು:
ಹಾಸನ ಕ್ಷೇತ್ರದಲ್ಲಿ ಪೆನ್ ಡ್ರೈವ್ ಹಂಚಿ ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದು ಲೋಕಸಭೆಗೆ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬರು ದೂರು ನೀಡಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆಮನೋಜ್‌ಕುಮಾರ್ ಮೀನಾ ಪ್ರತಿಕ್ರಿಯಿಸಿದರು.
-------------------------------------------------------