

ಹಾಸನ: ಕಳೆದ ಗುರುವಾರ (ಅ.25) ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ (Hassan) ಜಿಲ್ಲೆಯ ಅಧಿದೇವತೆ, ಹಾಸನಾಂಬೆ ದೇವಿಯ ದೇಗುಲದ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗಿದ್ದು, ಹಾಸನಾಂಬೆ ತಾಯಿ ದರ್ಶನ ಪಡೆಯಲು ಭಕ್ತರ ಸಾಗರವೇ ಹರಿದುಬರುತ್ತಿದೆ.
ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಭಕ್ತಾಧಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಸಿಬ್ಬಂದಿಗಳು ತೀರ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಭದ್ರತಾ ಸಿಬ್ಬಂದಿಗಳಿದ್ದರು ಸಹ ನುಗ್ಗಿ ಬರುತ್ತಿರುವ ಭಕ್ತಾಧಿಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಇತರೆ ಜಿಲ್ಲೆಗಳಿಗೂ ಹಂಚಲಾದ ವಿವಿಐಪಿ ಪಾಸ್ಗಳು ಎಂದು ಹೇಳಲಾಗಿದೆ. ಬೇಕಾಬಿಟ್ಟಿಯಾಗಿ ಪಾಸ್ಗಳನ್ನು ಹಂಚಲಾದ ಹಿನ್ನಲೆ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಜಿಲ್ಲಾಡಳಿತ ದೂರಿದೆ.
ಈ ಕಾರಣ ಭಕ್ತಾಧಿಗಳ ಸಂಖ್ಯೆಯನ್ನು ನಿಯಂತ್ರಿಸಲು ಇದೀಗ 1000 ರೂ. ವಿವಿಐಪಿ ಪಾಸ್ ಹಾಗೂ 300 ರೂ.ಗಳ ಟಿಕೆಟ್ ಪಾಸ್ಗಳನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಹೊರ ಜಿಲ್ಲೆಗಳಿಂದ ಏಕಾಏಕಿ ಭಕ್ತರ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ದಿಢೀರ್ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಪಾಸ್ ರದ್ದಾದ ಬೆನ್ನಲ್ಲೇ ದೂರದ ಊರುಗಳಿಂದ ಪ್ರಯಾಣಿಸಿ ಬಂದಿದ್ದ ಭಕ್ತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವಾಲಯದ ಮುಂದಿದ್ದ ಫ್ಲೆಕ್ಸ್, ಬ್ಯಾನರ್ ಹರಿದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.