ಬುರ್ಖಾ ಧರಿಸಿ ಬಂದ ಮೂವರು ಬಸ್​ನಲ್ಲಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು!

Thief case
Published on

ಹಾಸನ: ಬಸ್​ನಲ್ಲಿ ಚಿನ್ನಾಭರಣ-ಹಣದ ಜತೆ ಪ್ರಯಾಣಿಸುವ ಮುನ್ನ ಜೋಕೆ. ಕಳ್ಳರು ಯಾವಾಗ, ಯಾವ ಸೋಗಿನಲ್ಲಿ ಬರ್ತಾರೆ ಎಂಬುದು ಗೊತ್ತಾಗಲ್ಲ. ಸ್ವಲ್ಪ ಯಾಮಾರಿದ್ರೆ ಇರೋ ಬರೋದ್ದನ್ನೆಲ್ಲ ದೋಚಿಕೊಂಡು ಕ್ಷಣಾರ್ಧದಲ್ಲೇ ಪರಾರಿಯಾಗ್ತಾರೆ. ಹೀಗಂತ ಹೇಳಿದ್ದು ಏಕೆ ಗೊತ್ತಾ?

ಬುರ್ಖಾ ಧರಿಸಿ ನಗರ ಸಾರಿಗೆ ಬಸ್ ಹತ್ತಿದ್ದ ಮೂವರು ಖತರ್ನಾಕ್ ಕಳ್ಳಿಯರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಪರ್ಸ್ ಮತ್ತು ಚಿನ್ನದ ಸರ ಎಗರಿಸಿದ್ದ ಘಟನೆ ಹಾಸನದಲ್ಲಿ ಭಾನುವಾರ ಸಂಭವಿಸಿದೆ.

ಚಿನ್ನದ ಸರ ಮತ್ತು ಪರ್ಸ್​ ಕಳೆದುಕೊಂಡ ಮಹಿಳೆಯ ಅದೃಷ್ಟ ಚೆನ್ನಾಗಿತ್ತು. ಬುರ್ಖಾಧಾರಿಯಾಗಿ ಬಂದಿದ್ದ ಮೂವರು ಕಳ್ಳಿಯರ ಕೈಚಳಕವನ್ನು ಪಕ್ಕದಲ್ಲೇ ಕುಳಿತಿದ್ದ ಮತ್ತೊಬ್ಬ ಮಹಿಳೆ ಗಮನಿಸಿದ್ದು, ಕಳ್ಳಿಯರು ಇನ್ನೇನು ಎಸ್ಕೇಪ್​ ಆಗಬೇಕು ಅನ್ನುವಷ್ಟರಲ್ಲಿ ಕೂಗಿಕೊಂಡಿದ್ದಾರೆ. ತಕ್ಷಣ ಚಾಲಕ ಬಸ್ ನಿಲ್ಲಿಸುತ್ತಿದ್ದಂತೆ ಬಸ್​ನಿಂದ ಇಳಿದ ಮೂವರು ಕಳ್ಳಿಯರು ಬುರ್ಖಾ ಎಸೆದು ಓಡಲಾರಂಭಿಸಿದರು. ಈ ವೇಳೆ ಸಾರ್ವಜನಿಕರು ಕಳ್ಳಿಯರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ಬಸ್​ ನಿಲ್ದಾಣದಿಂದ ದಾಸಕೊಪ್ಪ ಮಾರ್ಗವಾಗಿ ಬಸ್​ ಸಂಚರಿಸುತ್ತಿತ್ತು. ಈ ವೇಳೆ ಪ್ರಯಾಣಿಕರು ಪರ್ಸ್​-ಸರ ಕಿತ್ತುಕೊಂಡಿದ್ದಾರೆ ಎಂದು ಕೂಗಾಡುತ್ತಿದ್ದರು. ಕೂಡಲೇ ಬಸ್​ ನಿಲ್ಲಿಸಿದೆ. ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಹಾಸನ ಡಿಪೋ-2ರಲ್ಲಿನ ಬಸ್​​ ಚಾಲಕ ಯೋಗರಾಜು ಘಟನೆ ಬಗ್ಗೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net