ಹಸೀನಾ ರಹಸ್ಯ ಪಲಾಯನ ಯೋಜನೆ

sheikh hasina
Published on

ನವದೆಹಲಿ: ಜನಾಕ್ರೋಶದ ಹಿನ್ನೆಲೆಯಲ್ಲಿ 2024ರ ಆಗಸ್ಟ್ 5ರಂದು ಢಾಕಾದಿಂದ ನಾಟಕೀಯವಾಗಿ ಪಲಾಯನಗೈದ ಬಾಂಗ್ಲಾದೇಶದ ಅಂದಿನ ಪದಚ್ಯುತ ಪ್ರಧಾನಿ ಶೇಖ್ ಹಸೀನಾ, ದೇಶದಿಂದ ತಪ್ಪಿಸಿಕೊಳ್ಳಲು ರಹಸ್ಯ ಯೋಜನೆ ಹೊಂದಿದ್ದರು ಎನ್ನುವುದನ್ನು ಬಾಂಗ್ಲಾದ ದೈನಿಕವೊಂದು ಬಹಿರಂಗ ಪಡಿಸಿದೆ. ಹಸೀನಾ ಇದ್ದ ಮಿಲಿಟರಿ ವಿಮಾನ ಮೊದಲು ದೆಹಲಿಯಲ್ಲಿ ಇಳಿಯಲು ಉದ್ದೇಶಿಸಿತ್ತು ಎಂಬುದನ್ನು ಕೋಲ್ಕತದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದ ಮೂಲಗಳು ತಿಳಿಸಿದ್ದವು. ಆದರೆ ಹಠಾತ್ತನೆ ಮಾರ್ಗ ಬದಲಾಯಿಸಿ ಉತ್ತರ ಪ್ರದೇಶದ ಗಾಜಿಯಾಬಾದ್​ನ ಹಿಂಡನ್ ವಾಯುನೆಲೆಯಲ್ಲಿ ಇಳಿಯಿತು ಎಂದು ವರದಿ ದೃಢಪಡಿಸಿದೆ.

ಅನಗತ್ಯ ಗಮನವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೀಗೆ ಮಾಡಿದ್ದಿರಬಹುದು ಎನ್ನುವುದು ಈಗ ತಿಳಿದು ಬಂದಿದೆ. ಹಸೀನಾ ಕೋಲ್ಕತದತ್ತ ಆಗಮಿಸುತ್ತಿದ್ದಾರೆ ಎಂದು ಭಾರತದ ಮಾಧ್ಯಮಗಳು ಕೂಡ ಆಗ ವರದಿ ಮಾಡಿದ್ದವು. ಕೊನೆಯ ಕ್ಷಣದವರೆಗೆ ಕೋಲ್ಕತ ಕಡೆ ಬರುತ್ತಿದ್ದ ವಿಮಾನ ಮಾರ್ಗ ಬದಲಾಯಿಸಿ ದೆಹಲಿಯತ್ತ ಪ್ರಯಾಣಿಸಿ ಅಂತಿಮವಾಗಿ ಹಿಂಡನ್ ವಾಯುನೆಲೆಯಲ್ಲಿ ಇಳಿದಿತ್ತು. ಬಾಂಗ್ಲಾದೇಶದ ವಾಯುಪ್ರದೇಶದಲ್ಲಿ ಸಾಧ್ಯವಾದಷ್ಟೂ ಕಡಿಮೆ ಸಮಯ ಕಳೆಯುವುದು ಇದರ ಉದ್ದೇಶವಾಗಿತ್ತು. ಹಸೀನಾ ಇದ್ದ ವಿಮಾನವನ್ನು ನಿಯೋಜಿತ ‘ತರಬೇತಿ ವಿಮಾನ’ ಎಂದು ಹೇಳಲಾಗಿತ್ತು.

ಹತ್ಯೆ ಮಾಡುವ ಉದ್ದೇಶದಿಂದ ಢಾಕಾದಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸ ಗಣ ಭವನಕ್ಕೆ ಲಗ್ಗೆ ಇಡುತ್ತಿದ್ದ ಜನರ ಗಮನವನ್ನು ಬೇರೆಡೆ ಸೆಳೆಯುವುದು ಅದರ ಗುರಿಯಾಗಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net