

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆಗೆ ಮಾತ್ರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಕ್ಕೆ ಪ್ರಮಾಣಪತ್ರ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಭಾವಿಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಛೇಡಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸುಪ್ರಿಂ ಕೋರ್ಟ್ ಹೇಳಿರುವ ಮಾರ್ಗದಲ್ಲಿ ಮುಡಾ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದರು.
ಈ ತೀರ್ಪನ್ನು ಆಧರಿಸಿ, ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿರುವುದರಿಂದ ಮೋದಿ ಮತ್ತು ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು ಎಂದು ಸಿಎಂ ಹೇಳಿದ್ದಾರೆ. ಆದರೆ, ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗಗಳ ಹೆಗ್ಗಳಿಕೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದೂರಿದರು.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ರಾಜ್ಯ ಸರ್ಕಾರ ಹೂಡಿದ್ದ ದಾವೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ರಾಜಕೀಯ ತರಬೇಡಿ ಎಂದು ತೀಕ್ಷ್ಣವಾಗಿ ಹೇಳಿರುವುದು ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯಗೆ ಅನಿಸುವುದಿಲ್ಲವೆ ? ಎಂದು ವ್ಯಂಗ್ಯವಾಗಿ ಕೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕೊರತೆ ಇಲ್ಲ. ಅಭಿವೃದ್ಧಿ ಆಗುತ್ತಿರುವ ಬಗ್ಗೆ ವಿರೋಧ ಪಕ್ಷಕ್ಕೆ ಸಿಎಂ ಮನವರಿಕೆ ಮಾಡುವುದನ್ನು ಬಿಟ್ಟು ತಮ್ಮ ಪಕ್ಷದ ಶಾಸಕರಾದ ರಾಜು ಕಾಗೆ, ಬಿ.ಆರ್ ಪಾಟೀಲ್, ದೇಶಪಾಂಡೆ ಅವರು ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅದರ ಬಗ್ಗೆ ಗಮನಹರಿಸಲಿ ಎಂದು ಸಿ.ಟಿ.ರವಿ ಒತ್ತಾಯಿಸಿದರು.
ಸರ್ಕಾರದಲ್ಲಿ ಖಜಾನೆ ತುಂಬಿ ತುಳುಕುತ್ತಿದ್ದರೆ ರಾಜ್ಯದಲ್ಲಿ ಬೆಲೆ ಏರಿಕೆ ಯಾತಕ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಪೆಟ್ರೋಲ್ ಮತ್ತು ಡೀಸಲ್ ಮೇಲೆ ಸೆಸ್ ವಿಧಿಸಿದ್ದೀರಿ, ವಿದ್ಯುತ್ ಯುನಿಟ್ ದರವನ್ನು ಏರಿಕೆ ಮಾಡಿದ್ದೀರಿ, ಹಾಲಿನ ಉತ್ಪನ್ನಗಳ ದರ ಏರಿಕೆ ಏಕೆ? ಮೆಟ್ರೋ ದರ, ಬಸ್ಸು ಪ್ರಯಾಣದ ದರ ಏರಿಸಿದ್ದೇಕೆ? ಎಂದು ಕೇಳಿದರು.
ಬೆಲೆ ಏರಿಕೆ ಮಾಡಿದ್ದರೂ ಈ ವರ್ಷದ ಬಜೆಟ್ಟಿನ ವಾರ್ಷಿಕ ಅಂದಾಜು ಒಂದು ಲಕ್ಷದ ಹದಿನಾರು ಸಾವಿರ ಕೋಟಿ ರೂ ಸಾಲ ಮಾಡಿ ಬಜೆಟ್ಟಿನ ಕೊರತೆ ತುಂಬಿಸುವ ಕೆಲಸ ಮಾಡಿದ್ದೀರಿ. ಆದರೆ ನಿಮಗೆ ನೀವೆ ಸಾಧನೆ ಮಾಡಿದ್ದೀರಿ ಎಂದು ಮೈಸೂರಿನಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಸಿಎಂಗೆ ಎಂದು ಕುಟುಕಿದರು.
ಧರ್ಮಸ್ಥಳ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಎಸ್‍ಐಟಿ ನೇಮಕ ಮಾಡಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ತನಿಖೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ನಡೆಯಲಿ. ತಪ್ಪು ಯಾರೇ ಮಾಡಿದ್ದರು ತಪ್ಪಿಗೆ ಶಿಕ್ಷೆಯಾಗಲಿ; ತನಿಖೆಗೆ ನಾವು ಮಧ್ಯಪ್ರವೇಶಿಸುವುದಿಲ್ಲ; ಆದರೆ ತನಿಖೆಗೆ ಮುನ್ನವೇ ಕೆಲವರು ತನಿಖೆ ನಡೆಸಿ ತೀರ್ಪು ಕೊಡುವ ಪ್ರವೃತ್ತಿ ಸ್ವೀಕಾರಾರ್ಹವಲ್ಲ ಎಂದರು.
ಧರ್ಮಸ್ಥಳ ಎಂಬ ಸಂಸ್ಥೆಯನ್ನೇ ಅನುಮಾನಿಸುವ; ಸಂಸ್ಥೆಯ ಮುಖ್ಯಸ್ಥರನ್ನೇ ತಪ್ಪಿತಸ್ಥರೆಂಬಂತೆ ಬಿಂಬಿಸುವ ಷಡ್ಯಂತ್ರದ ವಿರುದ್ಧ ನಾವಿದ್ದೇವೆ. ಭಕ್ತರು ನೀಡಿದ ಕಾಣಿಕೆಯಿಂದ ಧರ್ಮಸ್ಥಳ ಸಮಾಜದ ಭಾಗವಾಗಿ ತುಂಬಾ ಕೆಲಸವನ್ನು ಮಾಡಿದೆ. ಸರ್ಕಾರ ಈ ಕೆಲಸಗಳನ್ನು ಮಾಡಿಲ್ಲ ಎಂದರು.
ಧರ್ಮಸ್ಥಳವೆಂದರೆ ಸಂಸ್ಕತಿಯ ಒಂದು ಭಾಗ. ಮಂಜುನಾಥ ಸ್ವಾಮಿ ಶೈವ ಪರಂಪರೆಗೆ ಸೇರಿದ್ದರೆ ವೈಷ್ಣವ ಪರಂಪರೆಯ ಆರ್ಚಕರು ಪೂಜಿಸುತ್ತಾರೆ. ಜೈನ ಪರಂಪರೆಯವರು ನೇತೃತ್ವ ವಹಿಸುತ್ತಾರೆ. ಧರ್ಮಸ್ಥಳ ಸಂಸ್ಥೆ ನೀಡುತ್ತಿರುವ ಶಿಕ್ಷಣ, ಆರೋಗ್ಯದ ಕಾಳಜಿಯನ್ನು ಆಧರಿಸಿ ಹೊಗಳಿದ್ದೇನೆ ಎಂದು ತಿಳಿಸಿದರು.
ಧರ್ಮಸ್ಥಳದ ತೇಜೋವಧೆ ಮಾಡುವುದನ್ನು ಅಥವಾ ವಿಚಾರಣೆ ಇಲ್ಲದೆ ಗಲ್ಲಿಗೇರಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನುಮುಂದೆಯೂ ಇದನ್ನು ಮುಂದುವರೆಸಿದರೆ ನಾವು ಬಿಡುವುದಿಲ್ಲ. ಸಜ್ಜನರ ಮೌನ ದುರ್ಜನರಿಗೆ ದಾರಿಯಾಗುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಸಿ.ಟಿ.ರವಿ ಎಚ್ಚರಿಸಿದರು.
ರಾಜ್ಯ ವಕ್ತಾರರಾದ ಎಂ.ಜಿ.ಮಹೇಶ್, ಡಾ. ನರೇಂದ್ರ ರಂಗಪ್ಪ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ ಮಂಜುಳಾ ಅವರು ಉಪಸ್ಥಿತರಿದ್ದರು.