ಕಾಶಿಗೆ ಸಚಿವರ ತಂಡ ಮೋಜು-ಮಸ್ತಿಗೆ ಹೋಗಿದ್ದಾ ?: ಆರ್.ಅಶೋಕ್ ಪ್ರಶ್ನೆ

R Ashok
Published on

ಬೆಂಗಳೂರು: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸುವ ಸಲುವಾಗಿ ಮಂಡ್ಯ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನಪರಿಷತ್‌ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಈಗಾಗಲೇ ಮೂರು ದಿನಗಳ ಕಾಲ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಬಂದಿದ್ದಾರೆ.

ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಹೋಗಬೇಕು ಎನ್ನುವುದಾದರೆ ಸಚಿವರು ತಮ್ಮ ತಂಡದೊಂದಿಗೆ ಅಲ್ಲಿ ಹೋಗಿ ಮಾಡಿದ್ದಾದರೂ ಏನು? ಸರ್ಕಾರಿ ಹಣದಲ್ಲಿ ಮೋಜು-ಮಸ್ತಿ ಮಾಡಲು ಹೋಗಿದ್ದಾ? ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಅಯೋಧ್ಯೆ ರಾಮಮಂದಿರದ ಉದ್ಘಾಟನೆ ವೇಳೆ 30 ವರ್ಷ ಹಳೆ ಕೇಸುಗಳನ್ನು ಕಾಂಗ್ರೆಸ್ ಸರ್ಕಾರ ರೀ ಓಪನ್ ಮಾಡಿ ಕರಸೇವಕರನ್ನು ಜೈಲಿಗೆ ಹಾಕಿತ್ತು.

ಗಣೇಶನ ಮೂರ್ತಿಯನ್ನು ಪೊಲೀಸ್ ವ್ಯಾನ್ ಹತ್ತಿಸಿ,  ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುದಳ್ಳುರಿಯನ್ನು ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದು ತಿಪ್ಪೆ ಸಾರಿಸಿದ ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ಹಿಂದು ಧರ್ಮದ ಬಗ್ಗೆ, ಹಿಂದುಗಳ ಆಚಾರ-ವಿಚಾರದ ಬಗ್ಗೆ, ಸಂಪ್ರದಾಯ-ಪರಂಪರೆ ಬಗ್ಗೆ ಎಲ್ಲಿಲ್ಲದ ಆಸಕ್ತಿ ತೋರುವ ನಾಟಕ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ನಿಜವಾಗಿಯೂ ದೇಶ-ಧರ್ಮದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಬ್ರದರ್ಸ್ ಗಳು, ನಾಗಮಂಗಲ, ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಎಬ್ಬಿಸಿದ ಬ್ರದರ್ಸ್ ಗಳನ್ನ ಒದ್ದು ಒಳಗೆ ಹಾಕಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ಪುಂಡಾಟಿಕೆ ಮಾಡಿದ ಬ್ರದರ್ಸ್ ಗಳನ್ನ ಒದ್ದು ಒಳಗೆ ಹಾಕುವುದು ಬಿಟ್ಟು ಬರೀ ತೋರಿಕೆಗೆ ಕಾವೇರಿ ಆರತಿ ಮಾಡುವ ನಾಟಕ ಮಾಡಿದರೆ ಆ ತಾಯಿ ಕಾವೇರಿ ಮೆಚ್ಚುತ್ತಾಳಾ ಎಂದು ಆರ್.ಅಶೋಕ್ ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net