ಹರಿಯಾಣದಿಂದ ಪೂರೈಸುವ ನೀರಿನ ಪ್ರಮಾಣ ಮತ್ತಷ್ಟು ಕಡಿಮೆ ಆಗಿದೆ ಎಂದಿದ್ದೇಕೆ ಸಚಿವ ಸೌರಭ್​​ ಭಾರದ್ವಾಜ್​

Untitled-design-2024-06-23T142610.656
Published on

ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರರಾಜಧಾನಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ನೀರಿನ ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಸಚಿವೆ ಅತಿಶಿ ಸತ್ಯಾಗ್ರಹ ನಡೆಸುತ್ತಿರುವುದು ಗೊತ್ತೆ ಇದೆ. ಈ ಮಧ್ಯೆ ಅತಿಶಿ ಉಪವಾಸ ಸತ್ಯಾಗ್ರಹದ ನಂತರ ಹರಿಯಾಣದ ಬಿಜೆಪಿ ಸರ್ಕಾರವು ನೀರಿನ ಪೂರೈಕೆಯನ್ನು ಮತ್ತಷ್ಟು ಕಡಿಮೆ ಮಾಡಿದೆ ಎಂದು ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದರು.

ಹರಿಯಾಣದ ಬಿಜೆಪಿ ಸರ್ಕಾರ ನಿರಂತರವಾಗಿ ಸುಳ್ಳು ಹೇಳುತ್ತಿದೆ. ಅತಿಶಿಯ ಧರಣಿಯ ನಂತರ ಹರಿಯಾಣವು ಕನಿಷ್ಟ 17 MGD (ದಿನಕ್ಕೆ ಮಿಲಿಯನ್ ಗ್ಯಾಲನ್) ಹೆಚ್ಚಿನ ನೀರನ್ನು ಕಡಿಮೆ ಮಾಡಿದೆ. ಆದ್ದರಿಂದ ಈಗ ಹರಿಯಾಣವು 117 MGD ಕಡಿಮೆ ನೀಡುತ್ತಿದೆ ಎಂದು ಹೇಳಿದರು.

'ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ತಂಡ ಎಂದು ಮಾತನಾಡುವ ಸ್ಥಳದಲ್ಲಿ ದೆಹಲಿಗೆ ಹರಿಯಾಣದ ಬಿಜೆಪಿ ಸರ್ಕಾರದಿಂದ ನೀರಿನಿಂದ ವಂಚಿತವಾಗುತ್ತಿದೆ. ದೆಹಲಿಯ ಜಂಗ್‌ಪುರ ಬಳಿಯ ಭೋಗಲ್‌ನಲ್ಲಿ ಅತಿಶಿ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರರಾಜಧಾನಿಗೆ ತನ್ನದೇ ಆದ ನೀರಿಲ್ಲದ ಕಾರಣ ಮತ್ತು ಎಲ್ಲಾ ನೀರು ನೆರೆಯ ರಾಜ್ಯಗಳಿಂದ ಬರುವುದರಿಂದ ದೆಹಲಿಯಲ್ಲಿ ಭಾರಿ ನೀರಿನ ಸಮಸ್ಯೆ ಇದೆ ಎಂದು ಸಚಿವರು ಹೇಳಿದರು.

ದೆಹಲಿಯ ಒಟ್ಟು ನೀರು 1005 MGD, ಅದರಲ್ಲಿ 613 MGD (ದಿನಕ್ಕೆ ಮಿಲಿಯನ್ ಗ್ಯಾಲನ್) ಹರಿಯಾಣದಿಂದ ಬರುತ್ತದೆ ಆದರೆ ಕಳೆದ 3 ವಾರಗಳಲ್ಲಿ ಹರಿಯಾಣ ಅದನ್ನು ಕಡಿಮೆ ಮಾಡಿದೆ. ಹರಿಯಾಣ ಸರ್ಕಾರ ದೆಹಲಿಗೆ ನೀರು ನೀಡುತ್ತಿಲ್ಲ ಎಂದು ಅತಿಶಿ ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್​​ ಖಾತೆಯಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ಬರೆದಿದ್ದಾರೆ. ದೆಹಲಿಗೆ ದಿನಕ್ಕೆ 1,005 ಮಿಲಿಯನ್ ಗ್ಯಾಲನ್ (MGD) ನೀರಿನ ಅಗತ್ಯವಿದೆ, ಅದರಲ್ಲಿ 613 MGD ನೆರೆಯ ರಾಜ್ಯ ಹರಿಯಾಣದಿಂದ ಬರುತ್ತದೆ ಎಂದು ತಿಳಿಸಿದ್ದಾರೆ.

ಹತ್ನಿಕುಂಡ್ ಬ್ಯಾರೇಜ್‌ನಲ್ಲಿ ಸಾಕಷ್ಟು ನೀರಿದೆ, ಆದರೆ ದೆಹಲಿಗೆ ನೀರು ಬಿಡುವ ಗೇಟ್ ಮುಚ್ಚಲಾಗಿದೆ. ಅಲ್ಲಿಂದ ನೀರು ಬಿಡುತ್ತಿಲ್ಲ ಎಂದು ಸಚಿವರು ಕಿಡಿಕಾರಿದರು. ದೆಹಲಿಯಲ್ಲಿ ನೀರಿನ ಬಿಕ್ಕಟ್ಟಿನ ಮಧ್ಯೆ ಜನರು ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ನೀರಿನ ಟ್ಯಾಂಕರ್‌ ಬಳಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಮುಂದುವರೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net